ನವದೆಹಲಿ [ಜೂ.21]: ಇತ್ತೀಚೆಗೆ ಅರುಣಾಚಲ ಪ್ರದೇಶದ ಗಡಿಯಲ್ಲಿ ಪತನಗೊಂಡಿದ್ದ ಭಾರತೀಯ ವಾಯುಪಡೆಗೆ ಸೇರಿದ ಎಎನ್‌-32 ವಿಮಾನದಲ್ಲಿದ್ದ ಯೋಧರ ಪೈಕಿ 6 ಯೋಧರ ದೇಹಗಳು ಪತ್ತೆಯಾಗಿದ್ದವು. ಇದೀಗ ಇನ್ನುಳಿದ 7 ಜನರ ದೇಹದ ಅವಶೇಷಗಳು ಪತ್ತೆಯಾಗಿವೆ. 

ಜೂ.3ರಂದು ಅಸ್ಸಾಂನ ಜೋರ್‌ಹಟ್‌ನಿಂದ ಅರುಣಾಚಲ ಪ್ರದೇಶದ ಮೆಂಚುಕಾ ಎಂಬಲ್ಲಿಗೆ ಪೈಲಟ್‌ಗಳು ಸೇರಿದಂತೆ 13 ಯೋಧರನ್ನೊಳಗೊಂಡಿದ್ದ ಎಎನ್‌-32 ಯುದ್ಧ ವಿಮಾನ ಹೊರಟಿತ್ತು. ಇದಾಗಿ ಅರ್ಧ ಗಂಟೆಯಲ್ಲೇ ಯುದ್ಧ ವಿಮಾನವು ಸಂಪರ್ಕ ಕಡಿದುಕೊಂಡು ಕಾಣೆಯಾಗಿತ್ತು. 

ಕೊನೆಗೆ ಒಂದು ವಾರದ ನಿರಂತರ ಕಾರಾರ‍ಯಚರಣೆ ಬಳಿಕ ಸಿಯಾಂಗ್‌ ಮತ್ತು ಶಿ-ಯೊಮಿ ಜಿಲ್ಲೆಗಳ ಗಡಿಯಲ್ಲಿ ಗಟ್ಟೆಎಂಬ ಗ್ರಾಮದಲ್ಲಿ ಯುದ್ಧ ವಿಮಾನದ ಅವಶೇಷಗಳು ಪತ್ತೆಯಾಗಿದ್ದವು. ಆದರೆ ಭಾರೀ ಕಂದಕದಲ್ಲಿ ವಿಮಾನ ಪತನಗೊಂಡಿದ್ದ ಕಾರಣ ಮತ್ತು ಪ್ರತಿಕೂಲ ಹವಾಮಾನ ಕಾರಣ, ಘಟನಾ ಸ್ಥಳಕ್ಕೆ ತೆರಳುವುದು ಸಾಧ್ಯವಾಗಿರಲಿಲ್ಲ. ಇದೀಗ ಹವಾಮಾನದಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ್ದ ಯೋಧರ ತಂಡ, ದೇಹಗಳನ್ನು ಹುಡುಕುವಲ್ಲಿ ಯಶಸ್ವಿಯಾಗಿದೆ.