ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ)ವು ಸಾಮಾನ್ಯ ಹಾಗೂ ಹವಾನಿಯಂತ್ರಿತ ಬಸ್‌ಗಳಲ್ಲಿ ನೀಡಲಾಗುವ ದೈನಿಕ ಪಾಸ್‌ಗಳನ್ನು ವಿತರಿಸಲಾಗುತ್ತದೆ.
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ)ವು ಸಾಮಾನ್ಯ ಹಾಗೂ ಹವಾನಿಯಂತ್ರಿತ ಬಸ್‌ಗಳಲ್ಲಿ ನೀಡಲಾಗುವ ದೈನಿಕ ಪಾಸ್‌ಗಳನ್ನು ಇನ್ನು ಮುಂದೆ ಇಟಿಎಂ (ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್) ಮೂಲಕವೇ ಮುದ್ರಿಸಲು ತೀರ್ಮಾನಿಸಿದ್ದು, ಸೋಮವಾರದಿಂದ ಜಾರಿಗೆ ಬರಲಿದೆ. ಪೂರ್ವ ಮುದ್ರಿತ ಪಾಸ್‌ಗಳ ದುರ್ಬಳಕೆ ತಡೆಗಟ್ಟುವ, ನಿರ್ವಹಣಾ, ಸಿಬ್ಬಂದಿ ವೆಚ್ಚಕ್ಕೆ ಕಡಿವಾಣ ಹಾಗೂ ನಿರ್ವಾಹಕರ ಕೆಲಸ ಸರಳೀಕರಿಸುವ ಉದ್ದೇಶದಿಂದ ಬಿಎಂಟಿಸಿ ಇಟಿಎಂ ಮೆಷಿನ್ ಮೂಲಕವೇ ದೈನಂದಿನ ಪಾಸ್ ಮುದ್ರಿಸಲಾಗುವುದು.
ನಿಗಮದ ಬಸ್‌ಗಳಲ್ಲಿ 70 ಮತ್ತು 140 ಮೊತ್ತದ ದೈನಿಕ ಪಾಸ್‌ಗಳನ್ನು ಇಟಿಎಂ ಮೆಷಿನ್‌ನಲ್ಲಿ ಮುದ್ರಿಸಿ ಪ್ರಯಾಣಿಕರಿಗೆ ನೀಡಲಾಗುತ್ತದೆ. ಜೂನ್‌ನಲ್ಲಿ ನಿಗಮದ 28 ನೇ ಘಟಕದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ನಿರ್ವಾಹಕರು ಮತ್ತು ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಸಾಮಾನ್ಯ ಮತ್ತು ಹವಾನಿಯಂತ್ರಿತ ಬಸ್‌ಗಳಿಗೂ ವಿಸ್ತರಿಸಲಾಗಿದೆ.
ಗುರುತಿನ ಚೀಟಿ ಕಡ್ಡಾಯ: ಇಟಿಎಂ ಮೂಲಕ ನೀಡುವ ದೈನಂದಿನ ಬಸ್ ಪಾಸ್ ಪಡೆಯಲು ಪ್ರಯಾಣಿಕರು ಕಡ್ಡಾಯವಾಗಿ ಭಾವಚಿತ್ರವಿರುವ ಗುರುತಿನ ಚೀಟಿ (ಎಪಿಕ್, ಆಧಾರ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್ ಇತ್ಯಾದಿ) ತೋರಿಸಬೇಕು. ಅಂತೆಯೆ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಿಡಿಎಫ್ ಮಾದರಿಯ ಗುರುತಿನ ಚೀಟಿ ತೋರಿಸಿಯೂ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇಟಿಎಂ ಮೆಷಿನ್ ದೈನಂದಿನ ಪಾಸ್‌ಗಳ ಮಾರಾಟದಿಂದ ಬರುವ ಮೊತ್ತದಲ್ಲಿ ನಿರ್ವಾಹಕ ಮತ್ತು ಚಾಲಕರಿಗೆ ತಲಾ ಶೇ.0.25 ರಷ್ಟು ಪ್ರೋತ್ಸಾಹಧನ ಪಾವತಿಸಲಾಗುತ್ತದೆ.
