ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೆಟ್ರೋ ರೈಲಿನ ೯ ಸಾಧ್ಯತಾ ಮಾರ್ಗಗಳ ಪೈಕಿ ಯಾವುದು ಉತ್ತಮ ಎಂದು ನಿರ್ಧರಿಸುವ ಹೊಣೆಯನ್ನು ನಮ್ಮ ಮೆಟ್ರೋ ನಗರದ ನಾಗರಿಕರಿಗೆ ಹಸ್ತಾಂತರಿಸಿದೆ. ಎಲ್ಲ ಮಾರ್ಗಗಳ ನಕ್ಷೆಯನ್ನು ತನ್ನ ವೆಬ್‌'ಸೈಟ್‌ನಲ್ಲಿ ಪ್ರಕಟಿಸಿರುವ ಬಿಎಂಆರ್‌ಸಿಎಲ್, ಈ ಕುರಿತು ಜನರ ಆಯ್ಕೆ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಬೆಂಗಳೂರು: ನಗರದಲ್ಲಿ ಜಗತ್ತಿನ ಹತ್ತು ಹಲವು ರಾಷ್ಟ್ರಗಳನ್ನು ಸಂಪರ್ಕಿಸುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು ಎಷ್ಟು ನಿಜವೋ, ಆ ನಿಲ್ದಾಣ ತಲುಪುವ ದಾರಿ ತೀರಾ ಕಿರಿಕಿರಿ ಹುಟ್ಟಿಸುತ್ತದೆ ಎಂಬದೂ ಅಷ್ಟೇ ಸತ್ಯ. ಹೀಗಾಗಿ ನಮ್ಮ ಮೆಟ್ರೋ ಇದೀಗ ವಿಮಾನ ನಿಲ್ದಾಣದತ್ತ ಮುಖ ಮಾಡುತ್ತಿದೆ. ಆದರೆ ನೀವು ತಲುಪಬೇಕಾದ ಮಾರ್ಗ ಯಾವುದು ಎಂದು ಆಯ್ಕೆ ಮಾಡುವ ಅವಕಾಶವನ್ನ ನಮ್ಮ ಮೆಟ್ರೋ ನಿಮಗೆ ನೀಡಿದೆ.

ಬಹು ನಿರೀಕ್ಷಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಬೆಂಗಳೂರು ನಗರಕ್ಕೆ ಮೆಟ್ರೋ ಪ್ರಸ್ತಾಪವಾದಾಗಿನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕುರಿತು ಪರ ವಿರೋಧಗಳು ನಡೆಯುತ್ತಲೇ ಇದೆ. ಈ ನಡುವೆ ಅಮೆರಿಕದ ರೈಟ್ಸ್ ಸಂಸ್ಥೆ, ನಗರದ ಪ್ರಮುಖ ಸ್ಥಳಗಳಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ೯ ಮಾರ್ಗಗಳನ್ನು ಗುರುತಿಸಿ, ಸಾಧ್ಯತಾ ವರದಿ ನೀಡಿದೆ.

ಈ ಒಂಬತ್ತು ಮಾರ್ಗಗಳ ಪೈಕಿ ಯಾವ ಮಾರ್ಗ ಜನಸ್ನೇಹಿ, ಯಾವ ಮಾರ್ಗದಿಂದ ಹೆಚ್ಚು ಜನರಿಗೆ ಸಂಪರ್ಕ ಸಿಗಬಹುದು, ಯಾವ ಮಾರ್ಗ ಅಭಿವೃದ್ಧಿಗೆ ಪೂರಕವಾಗಿದೆ ಹಾಗೂ ಯಾವ ಮಾರ್ಗದಿಂದ ವಿಮಾನ ನಿಲ್ದಾಣಕ್ಕೆ ಹೊರಡುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಎಂಬ ಸಲಹೆಯನ್ನು ಬೆಂಗಳೂರಿಗರಿಂದಲೇ ಪಡೆಯುವ ಅಭಿಯಾನವನ್ನು ಬಿಎಂಆರ್‌ಸಿಎಲ್ ಆರಂಭಿಸಿದೆ. ಬಿಎಂಆರ್‌ಸಿಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ೯ ಮಾರ್ಗಗಳ ಪೈಕಿ ಪ್ರಜ್ಞಾವಂತ ನಾಗರಿಕರು ತಮ್ಮ ಆಯ್ಕೆ ಯಾವುದೆಂದು ತಿಳಿಸಬಹುದು. ಅಂತಿಮವಾಗಿ ಜನಾಭಿಪ್ರಾಯ ಆಧರಿಸಿ ಕೆಐಎಎಲ್‌ಗೆ ಮೆಟ್ರೋ ಮಾರ್ಗ ಆಯ್ಕೆ ಮಾಡಲಾಗುತ್ತದೆ.

ಎಲ್ಲ ಒಂಬತ್ತು ಮಾರ್ಗಗಳಿಗೆ ಸಂಬಂಧಿಸಿದಂತೆ ಮಾರ್ಗಗಳ ಉದ್ದ, ಯೋಜನಾ ವೆಚ್ಚ, ಯೋಜನಾ ಅವಧಿ, ಆರ್ಥಿಕ ವೆಚ್ಚದ ಬಗ್ಗೆ ವಿವಿರಗಳನ್ನು ನಿಗಮ ವೆಬ್‌ಸೈಟ್‌ನಲ್ಲಿ ನೀಡಿದೆ. ಆದರೆ ಸಾರ್ವಜನಿಕರ ಮತದಾನ ಅಥವಾ ಅಭಿಪ್ರಾಯ ಸಂಗ್ರಹ ಮಾಡುವ ನಿಟ್ಟಿನಲ್ಲಿ ಸ್ಪಷ್ಟ ಮಾರ್ಗಸೂಚಿ ಇಲ್ಲ.

ಹಾಗೇ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ಹೊಂದದಿರುವುದು ಕೂಡ ಗಮನಕ್ಕೆ ಬಂದಿದೆ. ಈ ಯೋಜನೆಗೆ ಯಾವುದೇ ಆರ್ಥಿಕ ಸಹಾಯವನ್ನು ರಾಜ್ಯ ಸರ್ಕಾರ ನೀಡುತ್ತಿಲ್ಲ. ಬದಲಾಗಿ ಮಾರ್ಗದ ಸುತ್ತಮುತ್ತಲ ಪ್ರದೇಶಗಳಲ್ಲಿ ಅಭಿವೃದ್ಧಿ ತೆರಿಗೆ ಸಂಗ್ರಹಿಸುವ ಮೂಲಕವೇ ಆರ್ಥಿಕ ಸಂಪನ್ಮೂಲ ಹೊಂದಿಸುವ ಸಾಧ್ಯತೆಯಿದೆ.

ಜನಸ್ನೇಹಿ ಉದ್ದೇಶ:
ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಮಾರ್ಗ ನಿರ್ಮಾಣ ಮೆಟ್ರೋ ಇತಿಹಾಸದಲ್ಲೇ ಮೈಲುಗಲ್ಲಾಗಲಿದೆ. ಯಾವ ಮಾರ್ಗ ಉತ್ತಮ ಎಂದು ನಾಗರಿಕರೇ ಆಯ್ಕೆ ಮಾಡಲಿದ್ದು, ಹೆಚ್ಚು ಜನಸ್ನೇಹಿ ಹಾಗೂ ಪಾರದರ್ಶಕ ಮೆಟ್ರೋ ಆಗಬೇಕೆಂಬುದು ಇದರ ಹಿಂದಿನ ಉದ್ದೇಶ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲಾ ತಿಳಿಸಿದ್ದಾರೆ.

ಮೇಲ್ ಕಳಿಸಿ:
ನಾಗರಿಕರು ಈ ಕೆಳಗಿನ ವೆಬ್‌ಸೈಟ್‌ಗೆ ಹೋಗಿ ವಿವರಗಳನ್ನು ಗಮನಿಸಿ ಕೆಳಗೆ ನೀಡಿರುವ ಮೇಲ್ ವಿಳಾಸಕ್ಕೆ ತಮ್ಮ ಅಭಿಪ್ರಾಯ ಕಳಿಸಬಹುದು.
ವೆಬ್‌ ವಿಳಾಸ: www.bmrcl.co.in/pdf/news/airportlink_orr.PDF
ಮೇಲ್ ಐಡಿ: bmrcl@dataone.in

ಪ್ರಸ್ತಾವಿತ ಮಾರ್ಗ, ಅದರ ದೂರ, ಅವಧಿ ಹಾಗೂ ವೆಚ್ಚದ ವಿವರ:
೧) ಮೇಖ್ರಿ ವೃತ್ತ-ಹೆಬ್ಬಾಳ-ಯಲಹಂಕ- ಏರ್‌ಪೋರ್ಟ್: ೩೧.೪ ಕಿ.ಮೀ., ೩ ವರ್ಷ, ೫,೦೨೪ ಕೋಟಿ ರೂ.
೨) ಯಶವಂತಪುರ-ಯಲಹಂಕ-ಕಣ್ಣೂರು-ಬಾಗಲೂರು- ಏರ್‌'ಪೋರ್ಟ್: ೩೫.೪ ಕಿ.ಮೀ., ೪ ವರ್ಷ, ೭,೦೮೦ ಕೋಟಿ ರೂ.
೩) ಯಶವಂತಪುರ-ಕೊಡಿಗೇಹಳ್ಳಿ-ಯಲಹಂಕ-ಬಾಗಲೂರು-ಏರ್‌ಪೋರ್ಟ್: ೨೮.೪ ಕಿ.ಮೀ., ೪ ವರ್ಷ, ೫,೬೮೦ ಕೋಟಿ ರೂ.
೪) ನಾಗವಾರ-ಹೆಬ್ಬಾಳ-ಯಲಹಂಕ (ಟ್ರಂಪೆಟ್ ಮೂಲಕ- ಏರ್‌ಪೋರ್ಟ್ ): ೨೯.೧ ಕಿ.ಮೀ., ೩ವರ್ಷ, ೪,೬೫೬ ಕೋಟಿ ರೂ.
೫) ಕೆ.ಆರ್.ಪುರ, ಬೂದಿಗೆರೆ ಕ್ರಾಸ್-ಬೂದಿಗೆರೆ-ಸಿಂಗಹಳ್ಳಿ- ಏರ್‌ಪೋರ್ಟ್: ೩೧.೯ ಕಿ.ಮೀ., ೪ ವರ್ಷ, ೬,೩೮೦ ಕೋಟಿ ರೂ.
೬) ನಾಗವಾರ- ಕೋಗಿಲು ಬಡಾವಣೆ-ಯಲಹಂಕ (ಟ್ರಂಪೆಟ್ ಮೂಲಕ-ಏರ್‌ಪೋರ್ಟ್): ೨೮.೭ ಕಿ.ಮೀ., ೪ ವರ್ಷ, ೫,೧೬೬ ಕೋಟಿ ರೂ.
೭) ನಾಗವಾರ- ಬೆಳ್ಳಹಳ್ಳಿ- ಕಣ್ಣೂರು, ಬಾಗಲೂರು-ಏರ್‌'ಪೋರ್ಟ್: ೨೭.೮ ಕಿ.ಮೀ., ೪ ವರ್ಷ, ೫,೫೬೦ ಕೋಟಿ ರೂ.
೮) ನಾಗವಾರ-ಕಣ್ಣೂರು-ಬಾಗಲೂರು-ಏರ್‌ಪೋರ್ಟ್: ೨೫.೯ ಕಿ.ಮೀ., ೪ ವರ್ಷ, ೫,೧೮೦ ಕೋಟಿ ರೂ.
೯) ನಾಗವಾರ-ಬೆಳ್ಳಹಳ್ಳಿ-ಯಲಹಂಕ ಟೌನ್-ಏರ್‌ಪೋರ್ಟ್: ೩೦.೩ ಕಿ.ಮೀ., ೩ ವರ್ಷ, ೪,೮೪೮ ಕೋಟಿ ರೂ.

(ಕನ್ನಡಪ್ರಭ ವಾರ್ತೆ)