Asianet Suvarna News Asianet Suvarna News

ಕೋರ್ಟ್ ಮೆಟ್ಟಿಲೇರಿದ ಮೆಟ್ರೋ ವೇತನ ಸಮಸ್ಯೆ!

ಬೆಂಗಳೂರಿನ ಮೆಟ್ರೋ ನೌಕರರು ಇದೀಗ ವೇತನ ಸಮಸ್ಯೆ ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಕೋರ್ಟ್ ಮೆಟ್ಟಿಲನ್ನು ಏರಲಾಗಿದೆ.

BMRCL Employees Face Salary Problem
Author
Bengaluru, First Published May 10, 2019, 8:26 AM IST

ಬೆಂಗಳೂರು :  ನಮ್ಮ ಮೆಟ್ರೋದ ನೌಕರರ ವೇತನ ಹೆಚ್ಚಳದ ಕುರಿತ ಸಮಸ್ಯೆ ಸದ್ಯಕ್ಕೆ ಬಗೆ ಹರಿಯುವಂತೆ ಕಾಣುತ್ತಿಲ್ಲ! ಇದೀಗ ಈ ಕುರಿತು ಬಿಎಂಆರ್‌ಸಿಎಲ್ ಎಂಪ್ಲಾಯಿಸ್‌ ಯೂನಿಯನ್‌ ನ್ಯಾಯಾಲಯದ ಮೆಟ್ಟಿಲೇರಿದೆ.

ನಮ್ಮ ಮೆಟ್ರೋದ 1300 ನೌಕರರಿಗೆ ಮೂರನೇ ವೇತನ ಆಯೋಗದ ಶಿಫಾರಸಿನ ಕೈಗಾರಿಕಾ ತುಟ್ಟಿಭತ್ಯೆ(ಐಡಿಎ) ಆಧಾರಿತ ವೇತನವನ್ನು ನ್ಯಾಯಯುತವಾಗಿ ಜಾರಿಗೆ ಆದೇಶಿಸುವಂತೆ ಕೋರಿ ಕೇಂದ್ರ ಸರ್ಕಾರದ ಕೈಗಾರಿಕಾ ನ್ಯಾಯಾಧೀಕರಣ ಕಂ ಕಾರ್ಮಿಕ ನ್ಯಾಯಾಲಯ(ಸಿಜಿಐಟಿಎಸ್‌)ಕ್ಕೆ ಅರ್ಜಿ ಸಲ್ಲಿಸಿದೆ.

ಮೂರನೇ ವೇತನ ಆಯೋಗದ ಶಿಫಾರಸಿನಂತೆ 2017 ಜನವರಿ 1ರಿಂದಲೇ ಅನ್ವಯವಾಗುವಂತೆ ಬಿಎಂಆರ್‌ಸಿ ನೌಕರರಿಗೆ ಇತರೇ ಸೌಲಭ್ಯಗಳನ್ನು(ಪರ್ಕ್ಸ್‌) ಶೇ.31.50 ರಷ್ಟು ನೀಡಬೇಕಿತ್ತು. ಆದರೆ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿ) 2019 ಜನವರಿ 1ರಿಂದ ಅನ್ವಯ ಆಗುವಂತೆ ಕೇವಲ ಶೇ.20ರಷ್ಟುಮಾತ್ರ ಕೊಟ್ಟಿದೆ. ಜತೆಗೆ ಮೂಲ ವೇತನಕ್ಕೆ ತುಟ್ಟಿಭತ್ಯೆ ಸೇರಿಸಿ ಶೇ.15ರಷ್ಟುಸೇರಿಸುವ ಬದಲಿಗೆ ಬಿಎಂಆರ್‌ಸಿಎಲ್ ಫಿಟ್‌ಮೆಂಟ್‌ನ್ನು ಶೇ.7.5ರಷ್ಟುಮಾತ್ರ ನೀಡಿದೆ.

ಆಯೋಗದ ಶಿಫಾರಸಿನ ಪ್ರಕಾರ ವೇತನ ನೀಡುವಂತೆ ನೌಕರರು ಕೇಳಿದಾಗ, ಈಗಾಗಲೇ ನಿಗಮ ನಷ್ಟದಲ್ಲಿದೆ. ಈ ಪರಿಸ್ಥಿತಿಯಲ್ಲಿ ಎಲ್ಲ ನೌಕರರಿಗೆ 2017 ಜನವರಿ 1ರಿಂದ ಅನ್ವಯವಾಗುವಂತೆ ಕೈಗಾರಿಕಾ ವೇತನ ನೀಡಲು ಸಾಧ್ಯವಿಲ್ಲ ಎಂದು ನಿಗಮದ ಆಡಳಿತ ಮಂಡಳಿ ಮೌಖಿಕವಾಗಿ ತಿಳಿಸಿದೆ.

ಆಡಳಿತ ಮಂಡಳಿಯ ನಿಲುವಿನಿಂದಾಗಿ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ವಾಹಕ(ಮೆನ್ಟೈನರ್‌), ಜೂನಿಯರ್‌ ಎಂಜಿನಿಯರ್‌, ಸ್ಟೇಷನ್‌ ಕಂಟ್ರೋಲರ್‌, ಮೆಟ್ರೋ ರೈಲು ಡ್ರೈವರ್‌(ಪೈಲೆಟ್‌), ಕಸ್ಟಮರ್‌ ಸರ್ವೀಸ್ ಅಧಿಕಾರಿ ಸೇರಿದಂತೆ ಸುಮಾರು 1300 ನೌಕರರಿಗೆ 4500 ನಿಂದ 15 ಸಾವಿರದ ವರೆಗೂ ವೇತನ ತಾರತಮ್ಯವಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಲಾಗಿದೆ.

ನೌಕರರಿಗೆ ಅನ್ಯಾಯ

ಈಗಾಗಲೇ ದೆಹಲಿ, ಕೊಚ್ಚಿನ್‌, ನಾಗ್ಪುರ್‌, ಲಕ್ನೋ, ಮುಂಬೈ ಸೇರಿದಂತೆ ಇತರ ಮೆಟ್ರೋ ನಿಗಮಗಳಲ್ಲಿ ಮೂರನೇ ವೇತನ ಆಯೋಗದ ಶಿಫಾರಸು ಜಾರಿಯಾಗಿದೆ, ಆದರೆ ಬೆಂಗಳೂರು ಮೆಟ್ರೋ ನಿಗಮ ಮಾತ್ರ ಜಾರಿ ಮಾಡಿಲ್ಲ, ಹೈಕೋರ್ಟ್‌ ಕೂಡ ಎರಡು ಬಾರಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚನೆ ನೀಡಿದ್ದರೂ ಕ್ರಮಕೈಗೊಂಡಿಲ್ಲ ಎಂದು ಬಿಎಂಆರ್‌ಸಿಎಲ್‌ ಎಂಪ್ಲಾಯಿಸ್‌ ಯೂನಿಯನ್‌ ಅರ್ಜಿಯಲ್ಲಿ ಅಲವತ್ತುಕೊಂಡಿದೆ.

19 ಬೇಡಿಕೆಗಳಿಗೆ ಅನುಮತಿ?

2019 ಜನವರಿ 1ಕ್ಕೆ ಅನ್ವಯವಾಗುವಂತೆ ಬಿಎಂಆರ್‌ಸಿಎಲ್ ವೇತನ ಪರಿಷ್ಕರಣೆ ನೀಡಿತ್ತಾದರೂ ಮೂರನೇ ವೇತನ ಆಯೋಗದ ಶಿಫಾರಸಿನಂತೆ ಸಂಪೂರ್ಣ ವೇತನ ನೀಡಿಲ್ಲ. ಈ ಕುರಿತು ಮೆಟ್ರೋ ನೌಕರರ ಸಂಘ ಸೆಂಟ್ರಲ್‌ ಲೇಬರ್‌ ಕಮೀಷನರ್‌ಗೆ ದೂರು ನೀಡಿತ್ತು. ಈ ದೂರನ್ನು ಕಾರ್ಮಿಕ ಆಯುಕ್ತರು ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದು, 25 ಬೇಡಿಕೆಗಳ ಪೈಕಿ 19 ಬೇಡಿಕೆಗಳನ್ನು ಪರಾಮರ್ಶಿಸಬಹುದು ಎಂದು ಕೇಂದ್ರ ಕಾರ್ಮಿಕ ಆಯುಕ್ತರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಎಂಪ್ಲಾಯಿಸ್‌ ಯೂನಿಯನ್‌ ಕೇಂದ್ರ ಸರ್ಕಾರದ ಕೈಗಾರಿಕಾ ನ್ಯಾಯಾಧೀಕರಣ ಕಂ ಕಾರ್ಮಿಕ ನ್ಯಾಯಾಲಯ(ಸಿಜಿಐಟಿಎಸ್‌)ಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಮೆಟ್ರೋ ನಿಗಮ ನಷ್ಟಹೊಂದಲು ಬಿಎಂಆರ್‌ಸಿಎಲ್‌ ಆಡಳಿತ ಮಂಡಳಿಯೇ ಕಾರಣ. ಅಧಿಕಾರಿಗಳು ಮಾಡುವ ತಪ್ಪಿಗೆ ನೌಕರರಿಗೆ ಅನ್ಯಾಯ ಮಾಡಲಾಗುತ್ತಿದೆ. ನಿಗಮದಲ್ಲಿ ಸೋರಿಕೆಯಾಗುತ್ತಿರುವ ಹಣದ ಬಗ್ಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಸರಿಪಡಿಸಲು ಆಡಳಿತ ಮಂಡಳಿ ಕ್ರಮಕೈಗೊಂಡಿಲ್ಲ. ದುಂದುವೆಚ್ಚ ಮಾಡಲಾಗುತ್ತಿದೆ.

-ಸೂರ್ಯನಾರಾಯಣಮೂರ್ತಿ, ಉಪಾಧ್ಯಕ್ಷ, ಬಿಎಂಆರ್‌ಸಿಎಲ್‌ ಎಂಪ್ಲಾಯಿಸ್‌ ಯೂನಿಯನ್‌.

ಜುಲೈ 17ರವರೆಗೆ ಕಾಲಾವಕಾಶ

ಮೂರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಕುರಿತು ಮೆಟ್ರೋ ನೌಕರರ ಸಂಘ ದಾಖಲಿಸಿರುವ ಪ್ರಕರಣ ಈಗಾಗಲೇ ವಿಚಾರಣೆಗೆ ಬಂದಿದ್ದು, ಆಕ್ಷೇಪಣೆ ಸಲ್ಲಿಸಲು ಜುಲೈ 17ರವರೆಗೆ ಕಾಲಾವಕಾಶ ಕೇಳಲಾಗಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ವರದಿ :  ಸಂಪತ್‌ ತರೀಕೆರೆ

Follow Us:
Download App:
  • android
  • ios