ಮುಂಬೈ(ಅ. 06): ಬಾಲಿವುಡ್ ಬಾದ್'ಶಾ ಶಾರುಕ್ ಖಾನ್ ಅವರ ಪ್ರೊಡಕ್ಷನ್ ಕಂಪನಿಗೆ ಸೇರಿದ್ದೆನ್ನಲಾದ ಕ್ಯಾಂಟೀನ್ ಕಟ್ಟಡವನ್ನು ಮುಂಬೈ ಪಾಲಿಕೆ ಇಂದು ಧ್ವಂಸ ಮಾಡಿದೆ. ಇಲ್ಲಿಯ ಗೋರೆಗಾಂವ್'ನಲ್ಲಿ ಡಿಎಲ್'ಎಚ್ ಮ್ಯಾಕ್ಸ್ ಎಂಬ ಕಟ್ಟಡದಲ್ಲಿ ಶಾರುಕ್ ಅವರ ರೆಡ್ ಚಿಲ್ಲೀಸ್ ಪ್ರೊಡಕ್ಷನ್ ಕಂಪನಿ ಇದೆ. ಈ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಪಾಲಿಕೆಯ ಅನುಮತಿ ಇಲ್ಲದೇ ಈ ಕ್ಯಾಂಟೀನ್ ನಿರ್ಮಿಸಲಾಗಿದೆ ಎಂಬ ದೂರು ಬಂದಿದ್ದರಿಂದ ಕೆಡವಬೇಕಾಯಿತು. 2 ಸಾವಿರ ಚದರಡಿ ವಿಸ್ತೀರ್ಣದ ಕಟ್ಟಡವನ್ನು ತೆರವು ಮಾಡಲಾಯಿತು ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ಹೇಳಿಕೆ ನೀಡಿದೆ.

ಅಧಿಕಾರಿಗಳು ಹೇಳುವ ಪ್ರಕಾರ, ರೆಡ್ ಚಿಲ್ಲೀಸ್ ಸಂಸ್ಥೆಯ ಉದ್ಯೋಗಿಗಳಿಗೆಂದು ನಾಲ್ಕನೇ ಮಹಡಿಯಲ್ಲಿ ಕ್ಯಾಂಟೀನ್ ಕಟ್ಟಲಾಗಿತ್ತು. ಇದಕ್ಕೆ ಪಾಲಿಕೆಯ ಅನುಮತಿ ಪಡೆದಿರಲಿಲ್ಲ.

ಆದರೆ, ಶಾರುಕ್ ಖಾನ್ ಅವರ ಸಂಸ್ಥೆ ನೀಡಿರುವ ಸ್ಪಷ್ಟನೆ ಪ್ರಕಾರ, ಪಾಲಿಕೆಯು ಕೆಡವಿರುವುದು ಕ್ಯಾಂಟೀನ್ ಅಲ್ಲ, ಬದಲಾಗಿ ಸೋಲಾರ್ ಪವರ್ ಕೊಡುವ ಉಪಕರಣಗಳಿರುವ ಕಟ್ಟಡವನ್ನಂತೆ. ಕಟ್ಟಡದ ಹೊರಗೆ ಸಿಬ್ಬಂದಿಯ ಊಟಕ್ಕೆಂದು ಟೇಬಲ್ ಮತ್ತು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಕ್ಯಾಂಟೀನ್ ಎಂಬುವಂಥದ್ದೇನೂ ಇರಲಿಲ್ಲ. ಅಲ್ಲದೇ, ಕಟ್ಟಡದ ಮಾಲಿಕತ್ವವು ರೆಡ್ ಚಿಲ್ಲೀಸ್ ಕಂಪನಿಯದ್ದಲ್ಲ. ತಾವು ಕೇವಲ ಬಾಡಿಗೆದಾರ ಮಾತ್ರ. ಇಡೀ ಕಟ್ಟಡಕ್ಕೆ ಪರಿಸರಸ್ನೇಹಿ ವಿದ್ಯುತ್ ಸೌಲಭ್ಯ ಕೊಡುತ್ತಿದ್ದ ಸೋಲಾರ್ ಪ್ಯಾನ್'ಗಳನ್ನು ಪಾಲಿಕೆ ಧ್ವಂಸ ಮಾಡಿದೆ. ಈ ವಿಚಾರದ ಬಗ್ಗೆ ಪಾಲಿಕೆಯ ಅಧಿಕಾರಿಗಳೊಂದಿಗೆ ತಾನು ಮಾತನಾಡುತ್ತಿರುವುದಾಗಿ ರೆಡ್ ಚಿಲ್ಲೀಸ್ ವಿಎಫ್'ಎಕ್ಸ್ ಸಂಸ್ಥೆ ಹೇಳಿಕೆ ನೀಡಿದೆ.