ಬ್ಲೂವೇಲ್ ಜಾಲಕ್ಕೆ ಸಿಲುಕಿದ್ದ ಪುದುಚೇರಿಯ ಕಾರೈಕಲ್ ಜಿಲ್ಲೆಯ ಅಲೆಕ್ಸಾಂಡರ್ ಎಂಬ ಯುವಕನನ್ನು ಮಂಗಳವಾರವಷ್ಟೇ ಪೊಲೀಸರು ರಕ್ಷಿಸಿದ್ದರು.

ಪುದುಚೆರಿ(ಸೆ.07): ವಿಶ್ವಾದ್ಯಂತ ಅನೇಕಾನೇಕ ಮಂದಿಯನ್ನು ಬಲಿ ಪಡೆದಿರುವ ಅತ್ಯಂತ ಅಪಾಯಕಾರಿ ಆನ್'ಲೈನ್ ಆಟ ‘ಬ್ಲೂವೇಲ್’ ಹೇಗಿರುತ್ತದೆ? ಅದು ನಿಮ್ಮ ಮೊಬೈಲ್‌'ಗೆ ಹೇಗೆ ಬರುತ್ತದೆ? ಎಂಬುದರ ಕುರಿತು ಆ ಆಟಕ್ಕೆ ದಾಸನಾಗಿ, ಸಾವಿನ ದವಡೆಯಿಂದ ಪಾರಾಗಿ ಬಂದಿರುವ ತಮಿಳುನಾಡಿನ 22 ವರ್ಷದ ಯುವಕನೊಬ್ಬ ಸಾದ್ಯಂತವಾಗಿ ವಿವರಿಸಿದ್ದಾನೆ.

ಬ್ಲೂವೇಲ್ ಜಾಲಕ್ಕೆ ಸಿಲುಕಿದ್ದ ಪುದುಚೇರಿಯ ಕಾರೈಕಲ್ ಜಿಲ್ಲೆಯ ಅಲೆಕ್ಸಾಂಡರ್ ಎಂಬ ಯುವಕನನ್ನು ಮಂಗಳವಾರವಷ್ಟೇ ಪೊಲೀಸರು ರಕ್ಷಿಸಿದ್ದರು. ಇದೀಗ ಆತನಿಗೆ ಕೌನ್ಸೆಲಿಂಗ್ ನಡೆಸಿ, ಪಾರು ಮಾಡಿದ್ದಾರೆ. ಬ್ಲೂವೇಲ್ ಕುರಿತು ಅಲೆಕ್ಸಾಂಡರ್ ಎಲ್ಲ ಮಾಹಿತಿ ಯನ್ನೂ ಸುದ್ದಿಗಾರರ ಜತೆ ಹಂಚಿಕೊಂಡಿದ್ದಾನೆ.

ಆತನ ಪ್ರಕಾರ, ಬ್ಲೂವೇಲ್ ಮೊಬೈಲ್ ಆ್ಯಪ್ ಅಲ್ಲ ಅಥವಾ ಅದು ಡೌನ್'ಲೋಡ್ ಮಾಡಿಕೊಳ್ಳಬಹುದಾದ ಗೇಮ್ ಕೂಡ ಅಲ್ಲ. ಅದೊಂದು ಲಿಂಕ್. ಪ್ರತಿಯೊಬ್ಬರಿಗೂ ವಿಶೇಷವಾಗಿ ಆಟವನ್ನು ಬ್ಲೂವೇಲ್ ನಿರ್ವಾಹಕ ವಿನ್ಯಾಸಗೊಳಿಸಿರುತ್ತಾನೆ. ನಿತ್ಯ ಒಂದೊಂದು ಟಾಸ್ಕ್ ನೀಡಿ ಮಧ್ಯರಾತ್ರಿ 2ರೊಳಗೆ ಪೂರ್ಣಗೊಳಿಸಲು ತಾಕೀತು ಮಾಡಲಾಗುತ್ತದೆ.

ವಾಟ್ಸ್‌ಆ್ಯಪ್‌'ನಿಂದ ಬಲೆಗೆ: ‘ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾಗ ಕಂಪನಿಯ ಸಹೋದ್ಯೋಗಿಗಳು ವಾಟ್ಸ್‌'ಆ್ಯಪ್ ಗ್ರೂಪ್ ಸೃಷ್ಟಿಸಿದ್ದರು. ಅದರ ಮೂಲಕ 2 ವಾರಗಳ ಹಿಂದೆ ಬ್ಲೂವೇಲ್ ಗೇಮ್‌'ನ ಲಿಂಕ್ ಬಂದಿತ್ತು. ರಜೆಗೆಂದು ಊರಿಗೆ ಬಂದಾಗ ಆ ಆಟ ಆಡಲು ಆರಂಭಿಸಿದೆ. ಆಡುತ್ತಾ ಆಡುತ್ತಾ ದಾಸನಾಗಿಬಿಟ್ಟೆ. ಚೆನ್ನೈಗೆ ಮರಳಿ ಹೋಗಲೇ ಇಲ್ಲ. ಪ್ರತಿನಿತ್ಯ ಬ್ಲೂವೇಲ್ ಅಡ್ಮಿನ್ ಒಂದು ಟಾಸ್ಕ್ ನೀಡುತ್ತಿದ್ದ. ಅದನ್ನು ನಸುಕಿನ ಜಾವ ಎರಡೊಳಗೆಮುಗಿಸಲೇಬೇಕಿತ್ತು. ಆರಂಭದ ಕೆಲವು ದಿನಗಳ ಕಾಲ ವೈಯಕ್ತಿಕ ವಿವರಗಳು ಹಾಗೂ ಫೋಟೋಗಳನ್ನು ಅಪ್‌'ಲೋಡ್ ಮಾಡುತ್ತಿದ್ದೆ. ಅದನ್ನೆಲ್ಲಾ ಬ್ಲೂವೇಲ್ ಅಡ್ಮಿನ್ ಸಂಗ್ರಹ ಮಾಡಿಟ್ಟುಕೊಳ್ಳುತ್ತಿದ್ದ. ಕೆಲ ದಿನಗಳ ಹಿಂದೆ ಮಧ್ಯರಾತ್ರಿ ಸ್ಮಶಾನಕ್ಕೆ ಕಳುಹಿಸಿ, ಸೆಲ್ಫಿ ತೆಗೆದುಕೊಂಡು, ಆನ್‌'ಲೈನ್‌'ನಲ್ಲಿ ಪೋಸ್ಟ್ ಮಾಡಲು ಹೇಳಲಾಯಿತು. ಬಳಿಕ ಪ್ರತಿನಿತ್ಯ ಹಾರರ್ ಸಿನಿಮಾ ನೋಡಬೇಕೆಂಬ ಸೂಚನೆ ಇತ್ತು. ಈ ಸಮಯದಲ್ಲಿ ಜನರ ಜತೆ ಮಾತನಾಡುವುದನ್ನೇ ಬಿಟ್ಟುಬಿಟ್ಟೆ. ಆಟ ನಿಲ್ಲಿಸಿಬಿಡಬೇಕು ಎಂದು ಬಯಸಿದೆನಾದರೂ ಅದು ಆಗಲೇ ಇಲ್ಲ’ ಎಂದು ತಿಳಿಸಿದ್ದಾನೆ.

ಈ ನಡುವೆ ಅಲೆಕ್ಸಾಂಡರ್ ನಡವಳಿಕೆಯಲ್ಲಿ ವ್ಯತ್ಯಾಸವಾಗಿರುವುದನ್ನು ಗುರುತಿಸಿದ ಅವರ ಸೋದರ ಅಜಿತ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಅದರಂತೆ ಪೊಲೀಸರು ಮಂಗಳವಾರ ನಸುಕಿನ ಜಾವ 4 ಗಂಟೆಗೆ ಅಲೆಕ್ಸಾಂಡರ್ ಮನೆಗೆ ತೆರಳಿದರು. ಆತ ಇನ್ನೇನು ಚಾಕು ಬಳಸಿ ಕೈ ಮೇಲೆ ಮೀನಿನ ಚಿತ್ರ ಬರೆಯಬೇಕು ಎನ್ನುವಷ್ಟರಲ್ಲಿ ಆತನನ್ನು ರಕ್ಷಣೆ ಮಾಡಲಾಗಿದೆ.