ಮಂಗಳೂರು [ಆ.1]:  ಸೋಮವಾರ ಸಂಜೆ ಉಳ್ಳಾಲದ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿ, ಹೊಯ್ಗೆ ಬಜಾರ್‌ ಹಿನ್ನೀರಿನಲ್ಲಿ ಬುಧವಾರ ಬೆಳಗ್ಗೆ ಶವವಾಗಿ ಪತ್ತೆಯಾದ ಕಾಫಿ ಉದ್ಯಮಿ ಸಿದ್ಧಾರ್ಥ ಶವದ ಹಣೆಯಲ್ಲಿ ಗಾಯದ ಗುರುತು, ಮೂಗಿನಲ್ಲಿ ರಕ್ತ ಸೋರಿಕೆ ಆಗಿರುವುದು ಕಂಡುಬಂದಿದೆ. ಇದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಅವರು ಧರಿಸಿದ್ದ ಟೀ-ಶರ್ಟ್‌ ಮೈ ಮೇಲೆ ಇಲ್ಲದಿರುವುದು ಈ ಅನುಮಾನಕ್ಕೆ ಮತ್ತಷ್ಟುಪುಷ್ಟಿನೀಡಿದೆ. ಸಿದ್ಧಾರ್ಥ ಸಾವಿನ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕವೇ ಇವುಗಳಿಗೆ ಉತ್ತರ ಲಭಿಸಲಿದೆ.

ಸಿದ್ಧಾರ್ಥ ಅವರ ಹಣೆಯ ಮೇಲೆ ಹೇಗೆ ಗಾಯ ಆಯಿತು ಎಂಬ ಬಗ್ಗೆ ಖಚಿತ ಮಾಹಿತಿ ಸಿಗುತ್ತಿಲ್ಲ. ಮೇಲ್ನೋಟಕ್ಕೆ ಸಿದ್ಧಾರ್ಥ ಅವರು ಸೇತುವೆಯಿಂದ ಕೆಳಮುಖವಾಗಿ ನದಿಗೆ ಧುಮುಕಿದ ವೇಳೆ ಹಣೆಗೆ ಗಾಯವಾಗಿರಬೇಕು ಎಂದು ಊಹಿಸಲಾಗಿದೆ. ಆದರೆ, ಕೆಳಮುಖವಾಗಿ ನೀರಿಗೆ ಧುಮುಕಿದಾಗ ಈ ರೀತಿ ಗಾಯವಾಗುವ ಸಾಧ್ಯತೆ ಇರುವುದಿಲ್ಲ ಎನ್ನುತ್ತಾರೆ ಈಜು ತಜ್ಞರು. ಹಾಗಾಗಿ ಶವದ ಮರಣೋತ್ತರ ಪರೀಕ್ಷೆ ವರದಿ ಬಳಿಕವೇ ಈ ಪ್ರಶ್ನೆಗಳಿಗೆ ಉತ್ತರ ಲಭಿಸಲಿದ್ದು, ಅಲ್ಲಿಯ ತನಕ ಕಾಯಬೇಕಾಗಿದೆ.

ಟೀ-ಶರ್ಟ್‌ ಇರಲಿಲ್ಲ:  ಸಿದ್ಧಾರ್ಥ ಶವ ಪತ್ತೆಯಾದ ಸಂದರ್ಭದಲ್ಲಿ ಮೈ ಮೇಲೆ ಅವರು ಧರಿಸಿದ್ದ ಟೀ-ಶರ್ಟ್‌ ಇರಲಿಲ್ಲ. ಆದರೆ, ಕಪ್ಪು ಪ್ಯಾಂಟ್‌, ಕಪ್ಪು ಶೂ ಹಾಗೆಯೇ ಇತ್ತು. ಎಡಗೈಯಲ್ಲಿ ಸ್ಮಾರ್ಟ್‌ ವಾಚ್‌, ಬಲಗೈಯಲ್ಲಿ ಎರಡು ಉಂಗುರ ಮಾತ್ರ ಇದ್ದವು. ಮೊಬೈಲ್‌, ಟೀ ಶರ್ಟ್‌ ಕಂಡುಬಂದಿರಲಿಲ್ಲ. ಹೀಗೆ ಟೀ-ಶರ್ಟ್‌ ಇಲ್ಲದಿರುವುದು ಮತ್ತಷ್ಟುಸಂಶಯಕ್ಕೆ ಕಾರಣವಾಗಿದೆ.

ಆದರೆ, ಮೊಬೈಲ್‌ ಸಿದ್ಧಾರ್ಥ ಪ್ಯಾಂಟ್‌ ಜೇಬಿನಲ್ಲಿ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೊಬೈಲ್‌ನ್ನು ಸ್ವಿಚ್‌ ಆಫ್‌ ಮಾಡಿ ಪ್ಯಾಂಟ್‌ನಲ್ಲಿ ಇರಿಸಿದ ಬಳಿಕವೇ ಸಿದ್ಧಾರ್ಥ ನದಿಗೆ ಜಿಗಿದಿರಬೇಕು ಎಂಬುದು ಪೊಲೀಸರ ಅಂಬೋಣ.

ನೀರಿನಲ್ಲಿ ಮುಳುಗಿ 2 ದಿನವಾದ ಕಾರಣ ಶವ ಕೊಳೆಯಲು ಆರಂಭಿಸಿದ್ದು, ಹೊಟ್ಟೆಭಾಗದಲ್ಲಿ ಸ್ವಲ್ಪ ಊದಿಕೊಂಡಿರುವುದು ಕಂಡುಬಂದಿದೆ. ಹಿನ್ನೀರು ತಂಪಾಗಿ ಇದ್ದರೆ ಶವ ಮೇಲೆ ಬರಲು ವಿಳಂಬವಾಗುತ್ತದೆ ಎನ್ನುತ್ತಾರೆ ಶವ ಪತ್ತೆಮಾಡಿದ ಮೀನುಗಾರ ರಿತೇಶ್‌ ಡಿಸೋಜಾ.