ಬೆಂಗಳೂರು :  ಆರು ವರ್ಷವಿದ್ದಾಗ ಸಾಮಾನ್ಯ ಜ್ವರಕ್ಕೆ ತೆಗೆದುಕೊಂಡ ಔಷಧಿಯಿಂದಾಗಿ ದೃಷ್ಟಿಕಳೆದುಕೊಂಡಿದ್ದ ಉತ್ತರ ಕರ್ನಾಟಕದ ಯುವಕನಿಗೆ 15 ವರ್ಷಗಳ ನಂತರ ಶಂಕರ ಕಣ್ಣಿನ ಆಸ್ಪತ್ರೆ ವೈದ್ಯರು ಉಚಿತವಾಗಿ ನಡೆಸಿರುವ ಅಪರೂಪದ ‘ಟೂತ್‌ ಇನ್‌ ದಿ ಐ’ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಈ ಹಿಂದೆ ಮಹಾಂತೇಶ್‌ ಪೋಷಕರು ಹುಬ್ಬಳಿ ಮತ್ತು ಹೈದರಾಬಾದ್‌ನ ಅನೇಕ ವೈದ್ಯರನ್ನು ಸಂಪರ್ಕಿಸಿದ್ದರೂ ದೃಷ್ಟಿಹೀನತೆಗೆ ಸೂಕ್ತ ಚಿಕಿತ್ಸೆ ದೊರೆತಿರಲಿಲ್ಲ. ಅಲ್ಲದೆ ಬಾಲಕನಿಗೆ 20 ವರ್ಷ ತುಂಬುವವರೆಗೂ ಯಾವುದೇ ಶಸ್ತ್ರಚಿಕಿತ್ಸೆ ಫಲ ನೀಡದು ಎಂದು ವೈದ್ಯರು ಕೈಚೆಲ್ಲಿದ್ದರು. ಇದೀಗ ಶಂಕರ ಕಣ್ಣಿನ ಆಸ್ಪತ್ರೆ ತಜ್ಞ ವೈದ್ಯರಾದ ಡಾ.ಪಲ್ಲವಿ ಜೋಷಿ, ಡಾ.ವಿನಯ್‌ ಪಿಳ್ಳೆ ಹಾಗೂ ಇತರೆ ವೈದ್ಯರು ಮಹಾಂತೇಶ್‌ಗೆ ಚಿಕಿತ್ಸೆ ನೀಡಿ ಒಂದು ಕಣ್ಣಿನ ದೃಷ್ಟಿಮರಳಿಸಿದ್ದಾರೆ.

ರೋಗಿಯ ತಂದೆ ತಾಯಿಗೆ ಶಸ್ತ್ರಚಿಕಿತ್ಸೆಯ ವೈದ್ಯಕೀಯ ವೆಚ್ಚ ಭರಿಸುವ ಶಕ್ತಿ ಇರಲಿಲ್ಲ. ಹಾಗಾಗಿ ಶಂಕರ ಆಸ್ಪತ್ರೆ ವೈದ್ಯರ ತಂಡ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ. ಚಿಕಿತ್ಸೆ ಬಳಿಕ ಮಹಾಂತೇಶ್‌ ಆರೋಗ್ಯವಾಗಿದ್ದು, ಶೇ.80ರಷ್ಟುದೃಷ್ಟಿಮರುಕಳಿಸಿದೆ. ಸರಿಯಾದ ಸಮಯದಲ್ಲಿ ಪರೀಕ್ಷೆ ಮಾಡಿದ್ದಲ್ಲಿ ದೃಷ್ಟಿದೋಷಕ್ಕೂ ಪರ್ಯಾಯ ಪರಿಹಾರಗಳಿವೆ ಎಂದು ತಜ್ಞ ವೈದ್ಯೆ ಪಲ್ಲವಿ ಜೋಷಿ ಹೇಳಿದ್ದಾರೆ.

ಮೋಡಿಫೈಡ್‌ ಆಸ್ಟಿಯೋ ಓಡಾಂಟೋ ಕೆರಾಟೊಪ್ರೊಸ್ಟೆಸಿಸ್‌ (ಎಂಒಒಕೆಪಿ) ಹೆಸರಿನಲ್ಲಿ ಕರೆಯಲ್ಪಡುವ ಟೂತ್‌ ಇನ್‌ ಐ ಕಠಿಣ ಶಸ್ತ್ರಚಿಕಿತ್ಸೆಯಾಗಿದೆ. ಎರಡು ಕಣ್ಣುಗಳ ದೃಷ್ಟಿದೋಷದಿಂದ ಬಳಲುತ್ತಿರುವವರಿಗೆ ಕೃತಕ ಕಣ್ಣಿನ ಪಾರದರ್ಶಕ ಪಟಲ ಜೋಡಿಸಲಾಗುತ್ತದೆ. ಈ ಚಿಕಿತ್ಸೆ ಸುಮಾರು 9 ತಿಂಗಳು ಸಮಯಾವಕಾಶ ತೆಗೆದುಕೊಳ್ಳುತ್ತದೆ. ರೋಗಿಯ ಕುಟುಂಬ ಸಂಪೂರ್ಣ ಬೆಂಬಲದಿಂದ ಈ ಚಿಕಿತ್ಸೆ ಯಶಸ್ವಿಯಾಗಿದೆ. ಈ ಹಿಂದೆ ಎಂಒಒಕೆಪಿ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಯೂ ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘ಟೂತ್‌ ಇನ್‌ ದಿ ಐ’ ಪ್ರಕ್ರಿಯೆ?

ವ್ಯಕ್ತಿ ಬಾಯಿಯಿಂದ ಲೋಳೆ ಪೊರೆ ಎಂಬ ಸಣ್ಣದಾದ ಕೆನ್ನೆಯ ಅಂಗಾಂಶ ತೆಗೆದು ರೋಗಿಯ ಕಣ್ಣನ್ನು ತಯಾರಿಸುತ್ತಾರೆ. ನಂತರ ಹಲ್ಲನ್ನು ಕಿತ್ತು, ಹಲ್ಲಿನ ಮಧ್ಯದಲ್ಲಿ ರಂಧ್ರ ಮಾಡಿ ಕೃತಕ ಕಣ್ಣಿನ ಪಾರದರ್ಶಕ ಪಟಲವಾಗಿ ಕಾರ್ಯ ನಿರ್ವಹಿಸುವ ಸಿಲಿಂಡರ್‌ ಅನ್ನು ಅಳವಡಿಸಲಾಗುತ್ತದೆ. ಈ ಸಂಪೂರ್ಣ ಭಾಗ (ಹಲ್ಲು ಮತ್ತು ಸಿಲಿಂಡರ್‌)ವನ್ನು ರೋಗಿಯ ಮುಖದ ಕಣ್ಣಿನ ಅಡಿಯಲ್ಲಿ ಜೈವಿಕವಾಗಿ ಒಗ್ಗೂಡಲು ಬಿಡಲಾಗುತ್ತದೆ. ಮತ್ತದರ ಮೇಲ್ಮೈಯನ್ನು ಲೋಳೆಪೊರೆಯಲ್ಲಿ ಮುಚ್ಚಲಾಗುತ್ತದೆ. ಆನಂತರ ಈ ಭಾಗವನ್ನು ತೆಗೆದು ಅದನ್ನು ಕಣ್ಣಿನಲ್ಲಿ ಜೋಡಿಸಲಾಗುತ್ತದೆ. ಮಧ್ಯಮ ಸಿಲಿಂಡರ್‌ ಮುಖಾಂತರ ಬೆಳಕು ಹರಿದು ದೃಷ್ಟಿಗೋಚರಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಶಸ್ತ್ರಚಿಕಿತ್ಸೆ ವಿಧಾನ ಕುರಿತಂತೆ ಮಾಹಿತಿ ನೀಡಿದ್ದಾರೆ.