ಭೋಪಾಲ್‌[ಡಿ.13]: ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಹಿನ್ನೆಲೆಯಲ್ಲಿ, 15 ವರ್ಷ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ಸತತ ಮೂರು ಬಾರಿ ಮಧ್ಯ ಪ್ರದೇಶ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಚೌಹಾಣ್‌, ಬುಧವಾರ ಮುಂಜಾನೆ ರಾಜ್ಯಪಾಲ ಆನಂದಿಬೆನ್‌ ಪಟೇಲ್‌ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ರಚನೆಗೆ ಬಿಜೆಪಿ ಹಕ್ಕು ಮಂಡಿಸುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಸೋಲಿನ ಸಂಪೂರ್ಣ ಹೊಣೆಯನ್ನು ನಾನೇ ಸ್ವೀಕರಿಸುತ್ತೇನೆ. ಪಕ್ಷದ ಕಾರ್ಯಕರ್ತರು ಚುನಾವಣೆಯಲ್ಲಿ ಕಠಿಣ ಶ್ರಮ ವಹಿಸಿದ್ದಾರೆ. ಜನರು ಕೂಡ ನಮ್ಮ ಬಗ್ಗೆ ಪ್ರೀತಿ ತೋರಿಸಿದ್ದಾರೆ. ನಾವು ಕಾಂಗ್ರೆಸ್‌ಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದೇವೆ. ಆದರೆ, ಬಹುಮತಕ್ಕೆ ಸ್ವಲ್ಪ ಸ್ಥಾನಗಳು ಕಡಿಮೆ ಆದವು. ನಾವು ಜನಾದೇಶವನ್ನು ಗೌರವಿಸುತ್ತೇವೆ. ಗೆಲುವಿಗಾಗಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ’ ಎಂದು ಹೇಳಿದರು.