ನಿರ್ಧಾರವಾಗಲಿದೆ ಸಲ್ಮಾನ್ ಭವಿಷ್ಯ : ಜೈಲೋ – ಪಾರೋ..?

First Published 5, Apr 2018, 8:19 AM IST
Blackbuck Poaching Case Verdict Today Salman Khan To Be In Jodhpur Court
Highlights

20 ವರ್ಷಗಳ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಇತರೆ ನಟರ ವಿರುದ್ಧ ದಾಖಲಾಗಿದ್ದ ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪನ್ನು ರಾಜಸ್ಥಾನದ ಜೋಧಪುರ ನ್ಯಾಯಾಲಯ ಗುರುವಾರ ಪ್ರಕಟಿಸಲಿದೆ.

ಜೋಧಪುರ: 20 ವರ್ಷಗಳ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಇತರೆ ನಟರ ವಿರುದ್ಧ ದಾಖಲಾಗಿದ್ದ ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪನ್ನು ರಾಜಸ್ಥಾನದ ಜೋಧಪುರ ನ್ಯಾಯಾಲಯ ಗುರುವಾರ ಪ್ರಕಟಿಸಲಿದೆ.

ಹೀಗಾಗಿ ಚಿತ್ರೋದ್ಯಮ ಹಾಗೂ ಸಲ್ಮಾನ್ ಖಾನ್ ಅಭಿಮಾನಿಗಳು ಈ ತೀರ್ಪನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಆರೋಪ ಸಾಬೀತಾದರೆ ಸಲ್ಮಾನ್ ಗರಿಷ್ಠ 6 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬರಲಿದೆ.

‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಶೂಟಿಂಗ್ ವೇಳೆ ನಡೆದಿದ್ದ ಬೇಟೆ ಪ್ರಕರಣ ಇದಾಗಿದ್ದು,ಸಲ್ಮಾನ್ ಖಾನ್ ಮಾತ್ರವೇ ಅಲ್ಲದೇ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ, ನೀಲಂ ಕೂಡ ಆರೋಪಿಗಳಾಗಿದ್ದಾರೆ. ಎಲ್ಲಾ ಆರೋಪಿ ಗಳು ಬುಧವಾರವೇ ಜೋಧಪುರಕ್ಕೆ ಬಂದು ತಲುಪಿದ್ದಾರೆ.

ಏನಿದು ಪ್ರಕರಣ?: ಚಿತ್ರೀಕರಣಕ್ಕೆಂದು ರಾಜಸ್ಥಾನದಲ್ಲಿ ತಂಗಿದ್ದ ಸಲ್ಮಾನ್ ಖಾನ್ ಹಾಗೂ ಇತರೆ ಆರೋಪಿಗಳು, 1998ರ ಅ.1 ಹಾಗೂ 2ರ ನಡುವಣ ರಾತ್ರಿ ಜೋಧಪುರ ಬಳಿಯ ಕಂಕಣಿ ಗ್ರಾಮದಲ್ಲಿ ಜಿಪ್ಸಿಯಲ್ಲಿ ಪ್ರಯಾಣಿಸುತ್ತಿದ್ದರು. ಆಗ ಅವರ ಕಣ್ಣಿಗೆ ಕೃಷ್ಣಮೃಗಗಳ ಹಿಂಡು ಕಾಣಿಸಿತ್ತು. ಚಾಲಕನ ಸೀಟಿನಲ್ಲಿ ಕೂತಿದ್ದ ಸಲ್ಮಾನ್ ಆ ಹಿಂಡಿನತ್ತ ಗುಂಡು ಹಾರಿಸಿದ್ದರು. 2 ಕೃಷ್ಣಮೃಗಗಳು ಮೃತಪಟ್ಟಿದ್ದವು. ಇದನ್ನು ಸಾರ್ವಜನಿಕರು ಗಮನಿಸಿ, ಬೆನ್ನಟ್ಟಿದಾಗ, ಮೃತ ಕೃಷ್ಣಮೃಗಗಳನ್ನು ಅಲ್ಲೇ ಬಿಟ್ಟು ಸಲ್ಮಾನ್ ಮತ್ತು ತಂಡ ಪರಾರಿಯಾಗಿತ್ತು ಎಂದು ಸರ್ಕಾರಿ ಅಭಿಯೋಜಕರು ವಾದಿಸಿದ್ದಾರೆ.

ಚಿಂಕಾರಾ ಬೇಟೆ ಕುರಿತ ಪ್ರಕರಣದಲ್ಲೂ ಸಲ್ಮಾನ್ ದೋಷಿ ಎಂದು ಸಾಬೀತಾಗಿ, 5 ವರ್ಷ ಶಿಕ್ಷೆಯಾಗಿತ್ತು. ಆದರೆ ರಾಜಸ್ಥಾನ ಹೈಕೋರ್ಟ್ ಸಲ್ಮಾನ್‌ರನ್ನು ಖುಲಾಸೆಗೊಳಿಸಿತ್ತು. ಇದರ ವಿರುದ್ಧ ರಾಜಸ್ಥಾನ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.

loader