ಕೊಲಂಬೋ[ಏ.27]: 253 ಅಮಾಯಕರನ್ನು ಬಲಿ ಪಡೆದ ಲಂಕಾ ಸರಣಿ ಸ್ಫೋಟದ ಮಾಸ್ಟರ್‌ಮೈಂಡ್‌ ಝಹ್ರಾನ್‌ ಹಶೀಂ, ಶಾಂಗ್ರಿಲಾ ಹೋಟೆಲ್‌ನಲ್ಲಿ ತಾನೇ ಆತ್ಮಾಹುತಿ ದಾಳಿ ನಡೆಸಿ ಸಾವನ್ನಪ್ಪಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ. ಸ್ಥಳೀಯ ಭಯೋತ್ಪಾದಕ ಹಾಗೂ ಮುಲ್ಲಾ ಝಹ್ರಾನ್‌ ಹಶೀಂ ಮೃತದೇಹವು ಶಾಂಗ್ರಿಲಾ ಹೋಟೆಲ್‌ ಸ್ಫೋಟ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹೇಳಿದ್ದಾರೆ.

ನ್ಯಾಷನಲ್‌ ತೌಹೀದ್‌ ಜಮಾತ್‌(ಎನ್‌ಟಿಜೆ) ಮುಖ್ಯಸ್ಥನಾದ ಹಶೀಂ ಹಾಗೂ ಇಲ್ಹಾಂ ಅಹಮದ್‌ ಇಬ್ರಾಹಿಂ ಎಂಬ ಮತ್ತೋರ್ವ ಬಾಂಬರ್‌ ಜೊತೆಗೂಡಿ ಶಾಂಗ್ರಿಲಾ ಹೋಟೆಲ್‌ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ ಮಾಡಿದ್ದ. ಈ ವೇಳೆ ಹಶೀಂ ಸತ್ತಿರುವುದು ಸಿಸಿಟೀವಿ ದೃಶ್ಯಗಳಿಂದ ಖಚಿತವಾಗಿದೆ ಎಂಬುದನ್ನು ಮಿಲಿಟರಿ ಗುಪ್ತಚರ ತಿಳಿಸಿದೆ ಎಂದು ಸಿರಿಸೇನಾ ತಿಳಿಸಿದ್ದಾರೆ.

130ಕ್ಕೂ ಹೆಚ್ಚು ಐಸಿಸ್‌ ಉಗ್ರರ ಬೀಡು:

ಶ್ರೀಲಂಕಾದಲ್ಲಿ ಐಸಿಸ್‌ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ 130ಕ್ಕೂ ಹೆಚ್ಚು ಶಂಕಿತ ಉಗ್ರರ ಜಾಲ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಅಧ್ಯಕ್ಷ ಸಿರಿಸೇನಾ ಮಾಹಿತಿ ನೀಡಿದ್ದಾರೆ.

ಉಗ್ರರ ಸೆರೆಗೆ ಪಾಕ್‌ ನೆರವು:

ಏತನ್ಮಧ್ಯೆ, ಲಂಕಾ ಸರಣಿ ಸ್ಫೋಟ ಕೃತ್ಯದಲ್ಲಿ ಭಾಗಿಯಾದ ಉಗ್ರರ ಬಂಧನಕ್ಕೆ ಅಗತ್ಯ ಬಿದ್ದಲ್ಲಿ ಪಾಕಿಸ್ತಾನದ ನೆರವು ಕೋರುವುದಾಗಿ ಶ್ರೀಲಂಕಾ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ. ಭಾರತದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ಈ ಹಿಂದೆಯೂ ರಾಷ್ಟ್ರದ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಉತ್ತಮ ಸಹಕಾರ ನೀಡಿದೆ. ಹೀಗಾಗಿ, ಮುಂದೆಯೂ ಭಯೋತ್ಪಾದಕರ ಹುಟ್ಟಡಗಿಸಲು ಅಗತ್ಯ ಬಿದ್ದರೆ, ಪಾಕಿಸ್ತಾನದ ನೆರವು ಕೋರಲಾಗುತ್ತದೆ,’ ಎಂದು ಹೇಳಿದರು.