ನವದೆಹಲಿ[ಜೂ.25]: ವಿದೇಶದಲ್ಲಿ ಭಾರತೀಯರು ಹೊಂದಿರುವ ಕಪ್ಪು ಹಣದ ಮೊತ್ತ 15ರಿಂದ 34 ಲಕ್ಷ ಕೋಟಿ ರು.ವರೆಗೆ ಇರಬಹುದು ಎಂದು ದೇಶದ 3 ಪ್ರತಿಷ್ಠಿತ ಸಂಸ್ಥೆಗಳು ಅಂದಾಜಿಸಿವೆ.

1980ರಿಂದ 2010ರವರೆಗಿನ ಅಂದಾಜು ಇದಾಗಿದೆ. ರಿಯಲ್‌ ಎಸ್ಟೇಟ್‌, ಗಣಿಗಾರಿಕೆ, ಔಷಧ, ಪಾನ್‌ ಮಸಾಲಾ, ಗುಟ್ಕಾ, ತಂಬಾಕು, ಚಿನ್ನ, ಸರಕು, ಸಿನಿಮಾ, ಶಿಕ್ಷಣ ಕ್ಷೇತ್ರದಲ್ಲಿ ಅತಿ ಹೆಚ್ಚು ಕಪ್ಪು ಹಣ ಕಂಡುಬಂದಿದೆ ಎಂಬ ಮಾಹಿತಿ ಈ 3 ಸಂಸ್ಥೆಗಳ ಅಧ್ಯಯನದಲ್ಲಿ ತಿಳಿದುಬಂದಿದೆ ಎಂದು ಎಂ. ವೀರಪ್ಪ ಮೊಯ್ಲಿ ನೇತೃತ್ವದ ಹಣಕಾಸು ಸ್ಥಾಯಿ ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ವರದಿಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.

16ನೇ ಲೋಕಸಭೆಯಲ್ಲಿ ಸಂಸದರಾಗಿದ್ದ ವೀರಪ್ಪ ಮೊಯ್ಲಿ ಅವರು ‘ದೇಶದ ಒಳಗೆ ಹಾಗೂ ಹೊರಗೆ ಅಕ್ರಮ ಆಸ್ತಿ/ಸಂಪತ್ತಿನ ಸ್ಥಿತಿಗತಿ- ಒಂದು ವಿಮರ್ಶಾತ್ಮಕ ವಿಶ್ಲೇಷಣೆ’ ಎಂಬ ವರದಿಯನ್ನು ಲೋಕಸಭೆ ವಿಸರ್ಜನೆಯಾಗುವ ಮುನ್ನ ಅಂದರೆ ಮಾ.28ರಂದು ಲೋಕಸಭೆಗೆ ಸಲ್ಲಿಸಿದ್ದರು. ಆ ವರದಿಯನ್ನು ಈಗ ಸದನದ ಮುಂದಿಡಲಾಗಿದೆ.

ವರದಿಯಲ್ಲಿ ಏನಿದೆ?: ವಿದೇಶದಲ್ಲಿರುವ ಕಾಳಧನದ ಕುರಿತು ಊಹೆಯ ಮೇಲೆ ಅಂದಾಜು ಮಾಡಲಾಗಿದೆ. ಕಪ್ಪು ಹಣ ಲೆಕ್ಕಾಚಾರವನ್ನು ಯಾವ ವಿಧಾನದಲ್ಲಿ ಮಾಡಬೇಕು ಎಂಬ ಬಗ್ಗೆ ಈವರೆಗಿನ ಅಧ್ಯಯನಗಳಲ್ಲಿ ಏಕರೂಪತೆ ಅಥವಾ ಒಮ್ಮತಾಭಿಪ್ರಾಯವಿಲ್ಲ. ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ (ಎನ್‌ಸಿಎಇಆರ್‌), ರಾಷ್ಟ್ರೀಯ ಹಣಕಾಸು ನಿರ್ವಹಣೆ ಸಂಸ್ಥೆ (ಎನ್‌ಐಎಫ್‌ಎಂ) ಹಾಗೂ ರಾಷ್ಟ್ರೀಯ ಸಾರ್ವಜನಿಕ ನೀತಿ ಹಾಗೂ ಹಣಕಾಸು ಸಂಸ್ಥೆ (ಎನ್‌ಐಪಿಎಫ್‌ಪಿ)ಗಳು ಕಪ್ಪು ಹಣದ ಮೊತ್ತದ ಕುರಿತು ವರದಿಗಳನ್ನು ನೀಡಿವೆ.

ಎನ್‌ಸಿಎಇಆರ್‌ ಅಧ್ಯಯನದ ಪ್ರಕಾರ, 1980ರಿಂದ 2010ರವರೆಗಿನ ಅವಧಿಯಲ್ಲಿ ದೇಶದ ಹೊರಗಿರುವ ಕಾಳಧನದ ಮೌಲ್ಯ 26 ಲಕ್ಷ ಕೋಟಿ ರು.ನಿಂದ 34 ಲಕ್ಷ ಕೋಟಿ ರುಪಾಯಿ. ಎನ್‌ಐಎಫ್‌ಎಂ ವರದಿ ಪ್ರಕಾರ, 1990-2008ರ ಅವಧಿಯಲ್ಲಿ 9,41,837 ಕೋಟಿ ರು. ಕಾಳಧನ ದೇಶದಿಂದ ಹೊರಗೆ ಇದೆ. ಎನ್‌ಐಪಿಎಫ್‌ಪಿ ಸಂಸ್ಥೆಯ ಪ್ರಕಾರ, ಒಟ್ಟು ಜಿಡಿಪಿಯ ಶೇ.0.2ರಿಂದ ಶೇ.7.4ರಷ್ಟುಮೊತ್ತ 1997-2009ರ ಅವಧಿಯಲ್ಲಿ ವಿದೇಶಕ್ಕೆ ಹೋಗಿದೆ ಎಂದು ಸ್ಥಾಯಿ ಸಮಿತಿ ವರದಿ ತಿಳಿಸಿದೆ.

ವಿದೇಶಗಳಲ್ಲಿ ಭಾರತೀಯರು ಹೊಂದಿರುವ ಕಪ್ಪುಹಣದ ನಿಖರ ಮಾಹಿತಿ ಸಂಗ್ರಹ ಕಷ್ಟವೇ ಸರಿ, ಈಗ ಮಾಡಿರುವ ಲೆಕ್ಕಾಚಾರವು ಮೂರು ಸಂಸ್ಥೆಗಳು ನೀಡಿರುವ ವರದಿಯನ್ನು ಆಧರಿಸಿದ್ದಾಗಿದೆ. ಈ ಮೂರು ಸಂಸ್ಥೆಗಳು ನೀಡಿರುವ ಮಾಹಿತಿಯನ್ನು ಆಧರಿಸಿ ಒಂದು ಮೊತ್ತವನ್ನು ಹೇಳುವುದು ಸಾಧ್ಯವಿಲ್ಲ ಎಂದು ಸ್ವತಃ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಯದ ಅಭಾವದ ಹಿನ್ನೆಲೆಯಲ್ಲಿ ಸೀಮಿತ ಸಂಖ್ಯೆಯ ಪಾಲುದಾರರನ್ನು ಮಾತ್ರವೇ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಹೀಗಾಗಿ ಈ ವರದಿಯನ್ನು ಪ್ರಾಥಮಿಕ ವರದಿ ಎಂದು ಪರಿಗಣಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಇದೇ ವೇಳೆ ವಿಶೇಷ ತನಿಖಾ ತಂಡ ನೀಡಿರುವ 7 ವರದಿಗಳನ್ನು ಆಧಾರವಾಗಿಟ್ಟುಕೊಂಡು ಕೇಂದ್ರ ಹಣಕಾಸು ಸಚಿವಾಲಯವು, ಮುಂದಿನ ದಿನಗಳಲ್ಲಿ ದೇಶದ ಒಳಗೆ ಮತ್ತು ಹೊರಗೆ ಇರುವ ಕಪ್ಪುಹಣವನ್ನು ಬಯಲಿಗೆಳೆಯಲು ಇನ್ನಷ್ಟುಶ್ರಮವಹಿಸಲಿದೆ ಎಂದು ಸಂಸದೀಯ ವರದಿ ಬಯಸುತ್ತದೆ ಎಂದು ಹೇಳಿದೆ.

ಜೊತೆಗೆ ದೀರ್ಘಕಾಲದಿಂದ ಬಾಕಿ ಉಳಿದಿರುವ ನೇರ ತೆರಿಗೆ ಸಂಹಿತೆಯನ್ನು ಆದಷ್ಟುಶೀಘ್ರ ಅಂತಿಮಗೊಳಿಸಿ, ಸಂಸತ್ತಿನಲ್ಲಿ ಪುನಃ ಮಂಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ.

ಯಾರ ಅಧ್ಯಯನ?

ದೇಶದ 3 ಪ್ರತಿಷ್ಠಿತ ಸಂಸ್ಥೆಗಳಾದ ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ (ಎನ್‌ಸಿಎಇಆರ್‌), ರಾಷ್ಟ್ರೀಯ ಹಣಕಾಸು ನಿರ್ವಹಣೆ ಸಂಸ್ಥೆ (ಎನ್‌ಐಎಫ್‌ಎಂ) ಹಾಗೂ ರಾಷ್ಟ್ರೀಯ ಸಾರ್ವಜನಿಕ ನೀತಿ ಹಾಗೂ ಹಣಕಾಸು ಸಂಸ್ಥೆ (ಎನ್‌ಐಪಿಎಫ್‌ಪಿ) ಅಧ್ಯಯನ.

ಯಾವ್ಯಾವ ಕ್ಷೇತ್ರ?

ರಿಯಲ್‌ ಎಸ್ಟೇಟ್‌, ಗಣಿಗಾರಿಕೆ, ಔಷಧ, ಪಾನ್‌ ಮಸಾಲಾ, ಗುಟ್ಕಾ, ತಂಬಾಕು, ಚಿನ್ನ, ಸರಕು, ಸಿನಿಮಾ, ಶಿಕ್ಷಣ ಕ್ಷೇತ್ರದಲ್ಲಿ ಅತಿ ಹೆಚ್ಚು ಕಪ್ಪು ಹಣ ಪತ್ತೆ.