"ಸಾಮಾನ್ಯ ಜನರಿಗೆ ಈ ಸರಕಾರ ಭಾರೀ ನೋವು ತಂದಿದೆ. ಬಡವರಿಗೆ ತೊಂದರೆ ಕೊಟ್ಟ ಯಾವುದೇ ಸರಕಾರ ಉಳಿದಿಲ್ಲ" ಎಂದು ಅಖಿಲೇಶ್ ಯಾದವ್ ಎಚ್ಚರಿಕೆ ನೀಡಿದ್ದಾರೆ.

ಲಕ್ನೋ(ನ. 15): ಜಾಗತಿಕ ಆರ್ಥಿಕ ಕುಸಿತದ ಕಾಲದಲ್ಲಿ ದೇಶದ ನೆರವಿಗೆ ಬಂದದ್ದು ಕಪ್ಪು ಹಣದ ದಂಧೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ. ಭಾರತ-ಮಯನ್ಮಾರ್-ಥಾಯ್ಲೆಂಡ್ ಫ್ರೆಂಡ್'ಶಿಪ್ ಕಾರ್ ರ್ಯಾಲಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅಖಿಲೇಶ್ ಯಾದವ್ ಈ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಆದರೆ, ತಾನು ಕಪ್ಪು ಹಣದ ಬೆಂಬಲಿಗನಲ್ಲ ಎಂಬುದನ್ನು ಈ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.

"ಕಪ್ಪು ಹಣ ಚಲಾವಣೆಯಾಗಬಾರದು.. ಈ ವಿಚಾರದಲ್ಲಿ ನಾನು ಬಹಳ ಸ್ಪಷ್ಟವಾಗಿದ್ದೇನೆ. ಜಾಗತಿಕ ಆರ್ಥಿಕ ಕುಸಿತದ ಸಂದರ್ಭಗಳಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಹೊಡೆತ ಬಿದ್ದರೂ ಭಾರತಕ್ಕೆ ಅಂತಹ ಪ್ರತಿಕೂಲ ಅನುಭವವಾಗಿರಲಿಲ್ಲ. ಇದಕ್ಕೆ ಕಾರಣ ಕಪ್ಪು ಹಣದ ಪರ್ಯಾಯ ಆರ್ಥಿಕ ವ್ಯವಸ್ಥೆ. ಇದನ್ನು ಆರ್ಥಿಕ ತಜ್ಞರೇ ಒಪ್ಪಿಕೊಂಡಿದ್ದಾರೆ" ಎಂದು ಅಖಿಲೇಶ್ ಯಾದವ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಬಡವರನ್ನು ಎದುರು ಹಾಕಿಕೊಂಡವರು ಉಳಿದಿಲ್ಲ:
ಕೇಂದ್ರ ಸರಕಾರವು ಕಪ್ಪು ಹಣ ತಡೆಯಲು ತೆಗೆದುಕೊಂಡ ನೋಟು ನಿಷೇಧದ ನಿರ್ಧಾರದಿಂದ ಬಡಜನರಿಗೆ ಅನನುಕೂಲವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖಂಡರೂ ಆಗಿರುವ ಅಖಿಲೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಸಾಮಾನ್ಯ ಜನರಿಗೆ ಈ ಸರಕಾರ ಭಾರೀ ನೋವು ತಂದಿದೆ. ಬಡವರಿಗೆ ತೊಂದರೆ ಕೊಟ್ಟ ಯಾವುದೇ ಸರಕಾರ ಉಳಿದಿಲ್ಲ" ಎಂದು ಅಖಿಲೇಶ್ ಯಾದವ್ ಎಚ್ಚರಿಕೆ ನೀಡಿದ್ದಾರೆ.