ಮೈಸೂರು [ಜೂ.21] : ನಾಳೆ ಬೆಳಗ್ಗೆ ರಾಜ್ಯದಲ್ಲಿ ಚುನಾವಣೆ ನಡೆದರೂ ಕೂಡ ನಾವು 175 ಸೀಟು ಗೆಲ್ಲುತ್ತೇವೆ ಎಂದು ಬಿಜೆಪಿ ಶಾಸಕರೋರ್ವರು ಭವಿಷ್ಯ ನುಡಿದಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ, ದೇವೇಗೌಡರು ಹೇಳಿರುವುದು ನೂರಕ್ಕೆ ನೂರು ಸತ್ಯ. ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಹೇಳಿದ್ದಾರೆ. ಆದರೆ ಈ ರೀತಿ ನಿರ್ಧಾರ ತೆಗೆದುಕೊಳ್ಳುವುದು ಅವರ ಕೈಯಲ್ಲಿ ಇಲ್ಲ. ಈ ಬಗ್ಗೆ ಒಬ್ಬರೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು. 

ಇನ್ನು ನಾಳೆಯೇ ಚುನಾವಣೆ ಚುನಾವಣೆ ನಡೆದರೂ ನಾವು 175 ಸ್ಥಾನ ಗೆಲ್ಲುವ ಸಾಮರ್ಥ್ಯ ಹೊಂದಿದ್ದೇವೆ. ಬಿಜೆಪಿಯನ್ನು ಅಧಿಕಾರದಿಂದ ದೂರು ಇಡಲು ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು. 

ಇನ್ನು ಜೆಡಿಎಸ್ ಕೇಳುವ ಮುನ್ನವೇ ಕೈ ನಾಯಕರೇ ಜೆಡಿಎಸ್ ಮನೆ ಬಾಗಿಲಿಗೆ ಹೋಗಿ ಬೆಂಬಲ ನೀಡಿದ್ದಾರೆ. ನೂರಾರು ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಎಂತಹ ಸ್ಥಿತಿ ಬಂದಿದೆ. 37 ಸ್ಥಾನ ಪಡೆದ ಜೆಡಿಎಸ್ ಬಾಗಿಲು ಬಡಿಯುವಂತಾಗಿದೆ ಎಂದರು. 

ಮಧ್ಯಂತರ ಚುನಾವಣೆ ರಾಜ್ಯದಲ್ಲಿ ನಡೆದಲ್ಲಿ ನಾವು ಸಿದ್ಧವಾಗಿದ್ದೇವೆ ಎಂದು ಬಿಜೆಪಿ ಶಾಸಕ ನಾಗೇಂದ್ರ ಹೇಳಿದರು.