ಗದಗ[ಆ.17]  ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಕಟ್ಟಾ ಅಭಿಮಾನಿ ಕುಬೇರಪ್ಪ ಪರಸಪ್ಪ ಮಲ್ಮೇಮನವರ (35) ಹೃದಯಾಘಾತಕ್ಕೆ ಗುರಿಯಾಗಿದ್ದಾರೆ. ಗುರುವಾರ ಸಂಜೆಯಿಂದಲೇ ವಾಜಪೇಯಿ ಅವರ ಸಾವಿನ ಸುದ್ದಿಯನ್ನು ಕೇಳಿ ಮಾನಸಿಕವಾಗಿ  ಖಿನ್ನರಾದಂತೆ ವರ್ತಿಸುತ್ತಿದ್ದರು.

ಶುಕ್ರವಾರ ವಾಜಪೇಯಿ  ಅವರ ಅಂತ್ಯ ಸಂಸ್ಕಾರದ ಯಾತ್ರೆಯನ್ನು ಟಿವಿಯಲ್ಲಿ ನೊಡುತ್ತ ಇದ್ದಾಗಲೇ ಹೃದಯಾಘಾತವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ  ಯಳವತ್ತಿ ಗ್ರಾಮದಿಂದ ಗದಗ ಜಿಲ್ಲಾ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಿಲ್ಲ. 

ಬಿಜೆಪಿ ಕಾರ್ಯಕರ್ತರಾಗಿದ್ದ ಕುಬೇರಪ್ಪ ವಾಜಪೇಯಿ ಅವರ ಕಟ್ಟಾ ಅನುಯಾಯಿ ಆಗಿದ್ದರು. ಅವರ ಅಗಲಿಕೆಯ ನೋವಿನಲ್ಲಿಯೇ ಅವರ ಅಂತಿಮ ಸಂಸ್ಕಾರ ವೀಕ್ಷಿಸುತ್ತಲೇ ಅವರು ಕೂಡಾ ಸಾವಿನ ಕದ ತಟ್ಟಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇವರಿಗೆ ಪತ್ನಿ ಇಬ್ಬರು ಮಕ್ಕಳು ಹಾಗೂ ತಂದೆ ತಾಯಿ ಸಹೋದರ ಇದ್ದಾರೆ.