ಬಿಜೆಪಿ ನಾಯಕರಿಗೆ ಸತ್ಯ ಹೇಳಿ ಗೊತ್ತಿಲ್ಲ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಎಂದು ನಂಬಿಸುವುದರಲ್ಲೇ ಅವರಿಗೆ ಹೆಚ್ಚು ನಂಬಿಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. 

ಮಂಡ್ಯ/ಮಳವಳ್ಳಿ (ಏ.20): ಬಿಜೆಪಿ ನಾಯಕರಿಗೆ ಸತ್ಯ ಹೇಳಿ ಗೊತ್ತಿಲ್ಲ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಎಂದು ನಂಬಿಸುವುದರಲ್ಲೇ ಅವರಿಗೆ ಹೆಚ್ಚು ನಂಬಿಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. 

ಪಟ್ಟಣದ ಶಾಂತಿ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಯಡಿಯೂರಪ್ಪ ಅವರು ಅಲ್ಲಿನ ಅಭಿವೃದ್ಧಿಗೆ ಮಾಡಿರುವುದೇನು? ಉಪಚುನಾವಣೆ ಸಮಯದಲ್ಲಿ ಒಂದು ತಿಂಗಳು ಚಾಮರಾಜನಗರ ಜಿಲ್ಲೆಯಲ್ಲಿ ತಳವೂರಿದ್ದ ಅವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ಹೋಗುತ್ತೆ ಅಂತ ಒಮ್ಮೆಯೂ ಜಿಲ್ಲೆಗೆ ಕಾಲಿಡಲಿಲ್ಲ. ಅಂಥವರು ಏನು ಕೆಲಸ ಮಾಡಿದ್ದೀರಿ ಎಂದು ಗುಂಡ್ಲುಪೇಟೆ, ನಂಜನಗೂಡಿನಲ್ಲಿ ಪ್ರಶ್ನಿಸಿದರು ಎಂದು ಆಕ್ರೋಶ ಹೊರಹಾಕಿದರು. 

ಅಧಿಕಾರಕ್ಕೆ ಬರುವುದಿಲ್ಲ:

ನಮ್ಮಪ್ಪನಾಣೆಗೂ 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಈ ಮಾತನ್ನು ಬರೆದಿಟ್ಟುಕೊಳ್ಳಿ. ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯನ್ನು ಮುಂದಿನ ೨೦೧೮ರ ಚುನಾವಣೆಯ ದಿಕ್ಸೂಚಿ ಅಂತ ನಾವು ಎಲ್ಲೂ ಹೇಳಿರಲಿಲ್ಲ. ಯಡಿಯೂರಪ್ಪ ಸೇರಿ ಅನೇಕ ನಾಯಕರೇ ಹಾಗಂತ ಹೇಳಿದ್ದರು. ಅವರ ಮಾತಿನಂತೆ ಹೇಳುವುದಾದರೆ ೨೦೧೮ರ ಚುನಾವಣಾ ದಿಕ್ಸೂಚಿ ನಮ್ಮ ಪಕ್ಷದ ಕಡೆಗೇ ಇದೆಯೆಂದಂತಾಯ್ತಲ್ಲಾ? ಇದಕ್ಕೆ ಯಡಿಯೂರಪ್ಪ ಏನು ಹೇಳುತ್ತಾರೆ ಎಂದು ಸಿಎಂ ಪ್ರಶ್ನಿಸಿದರು.

ಧರಣಿ ಮಾಡಲಿ, ಸಾಥ್ ಕೊಡ್ತೇನೆ:

ಕೆಲವರು ಸಾಲ ಮನ್ನಾ ಮಾಡಿ ಎಂದು ಹೇಳಿಕೆ ಕೊಡುತ್ತಾ ಇಲ್ಲಿ ಅಗ್ಗದ ಪ್ರಚಾರ ಗಿಟ್ಟಿಸುತ್ತಾರೆ. ಅವರು ಏಕೆ ಪ್ರಧಾನಿ ಮೋದಿ ಕಚೇರಿ ಬಳಿ ಹೋಗಿ ಧರಣಿ ಮಾಡಿ ರೈತರ ಸಾಲಮನ್ನಾ ಮಾಡಿಸಬಾರದು. ಬೇಕಿದ್ದರೆ ನಾನೇ ಅವರಿಗೆ ಸಾಥ್ ಕೊಡುತ್ತೇನೆ ಎಂದು ಬಿಜೆಪಿ ಮುಖಂಡರಿಗೆ ಸಿಎಂ ಟಾಂಗ್ ಕೊಟ್ಟರು.

ಕೇಂದ್ರದಿಂದ ಸಾಲ ಮನ್ನಾ ಮಾಡಿಸುವ ತಾಕತ್ತು ಮಾಜಿ ಸಿಎಂ ಯಡಿಯೂರಪ್ಪ, ಈಶ್ವರಪ್ಪ , ಜಗದೀಶ್ ಶೆಟ್ಟರ್, ಅನಂತಕುಮಾರ್ ಸೇರಿ ಬಿಜೆಪಿಯ ಯಾವುದೇ ನಾಯಕರಿಗೂ ಇಲ್ಲ. ಇಲ್ಲಿ ಬಂದು ಸಾಲ ಮನ್ನಾ ಮಾಡಿ ಎಂದು ಜನರ ಮುಂದೆ ಬೊಬ್ಬೆ ಹೊಡೆಯುತ್ತಾರೆ. ರೈತರನ್ನು ಪ್ರಚೋದಿಸುವುದಷ್ಟೆ ಇವರ ಕೆಲಸ ಎಂದು ಹರಿಹಾಯ್ದರು 

ಚುನಾವಣೆ ಸಿದ್ಥತೆಯಂತೆ ಕಂಡ ಸರ್ಕಾರಿ ಕಾರ್ಯಕ್ರಮ!

ಶಾಂತಿ ಕಾಲೇಜು ಮೈದಾನದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಮುಂಬರುವ ಚುನಾವಣೆಯ ಪೂರ್ವ ಸಿದ್ಧತೆ ಎಂಬಂತೆ ಕಂಡು ಬಂತು. ಸಾವಿರಾರು ಜನರನ್ನು ಪ್ರತಿ ಹಳ್ಳಿಗಳಿಗೂ ಬಸ್ ಕಳುಹಿಸಿ ಕರೆ ತಂದಿದ್ದು, ಬಂದವರಿಗೆಲ್ಲಾ ಮಜ್ಜಿಗೆ, ಪಾನಕ ವಿತರಿಸಿದ್ದು, ಬಾಡೂಟದ ವ್ಯವಸ್ಥೆಯನ್ನೂ ಮಾಡಿದ್ದು ಅಚ್ಚರಿ ಮೂಡಿಸಿತ್ತು. ಅಲ್ಲದೆ, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಇಲ್ಲಿ ಚುನಾವಣಾ ಭಾಷಣವನ್ನೇ ಮಾಡಿದರು. ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ, ನರೇಂದ್ರಸ್ವಾಮಿ ಶಾಸಕನಾಗುತ್ತಾನೆ, ಈ ಬಾರಿ ಮಂತ್ರಿ ಮಾಡಬೇಕಿತ್ತು. ಆದರೆ, ಸಾಧ್ಯವಾಗಲಿಲ್ಲ. ಆತನಿಗೆ ವಯಸ್ಸು ಚಿಕ್ಕದು. ಮುಂದೆ ಆತನಿಗೆ ಒಳ್ಳೆಯ ಭವಿಷ್ಯವಿದೆ ಎಂದು ಮುಖ್ಯಮಂತ್ರಿಗಳು ಹೊಗಳಿದರು.