ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಒಟ್ಟು 19 ವಿಧಾನಸಭಾ ಕ್ಷೇತ್ರಗಳಿವೆ. ಬಿಜೆಪಿಯ ಪಾಲಿಗೆ ಕರಾವಳಿ ಕರ್ನಾಟಕ ಹಿಂದುತ್ವದ ಪ್ರಯೋಗಾಲಯ. ಹೀಗಾಗಿಯೇ ಈ ಬಾರಿ ಮೊದಲು ಇಲ್ಲಿಂದಲೇ ತನ್ನ ಚುನಾವಣಾ ರಣತಂತ್ರ ಹೆಣೆಯುವಲ್ಲಿ ಮುಂದಡಿ ಇಟ್ಟಿದೆ.

ಬೆಂಗಳೂರು(ಡಿ.6): ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಮಗ್ಗಲು ಬದಲಾಯಿಸುವುದು ಕರಾವಳಿ ಕರ್ನಾಟಕದ ವಿಶೇಷತೆ. ಹಿಂದಿನ ಹಲವು ಚುನಾವಣೆಗಳ ಫಲಿತಾಂಶ ಗಮನಿಸಿದರೆ ಇಲ್ಲಿ ಒಮ್ಮೆ ಕಾಂಗ್ರೆಸ್ಸಿಗೆ ಮತ್ತೊಮ್ಮೆ ಬಿಜೆಪಿಗೆ ಜನರ ಬೆಂಬಲ ವಾಲಿರುವುದು ಕಂಡು ಬರುತ್ತದೆ. ಜೆಡಿಎಸ್ ಪ್ರಭಾವ ಇಲ್ಲಿ ತೀರಾ ಕಡಿಮೆ. ರಾಜ್ಯದ ಇತರ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ನಾಡಧ್ವಜ, ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ಕುರಿತ ಬೇಡಿಕೆ ಮತ್ತಿತರ ಭಾವನಾತ್ಮಕ ವಿಷಯಗಳು ಮುಂಬರುವ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರದ ಭಾಗ್ಯಗಳೂ ಇಲ್ಲಿ ಕರಾಮತ್ತು ಮಾಡುತ್ತಿಲ್ಲ. ಇಲ್ಲಿ ಏನಿದ್ದರೂ ಹಿಂದುತ್ವದ ಪರ ಮತ್ತು ಹಿಂದುತ್ವದ ವಿರೋಧಿ ಅಲೆಯದ್ದೇ ಅಬ್ಬರ.

ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಒಟ್ಟು 19 ವಿಧಾನಸಭಾ ಕ್ಷೇತ್ರಗಳಿವೆ. ಬಿಜೆಪಿಯ ಪಾಲಿಗೆ ಕರಾವಳಿ ಕರ್ನಾಟಕ ಹಿಂದುತ್ವದ ಪ್ರಯೋಗಾಲಯ. ಹೀಗಾಗಿಯೇ ಈ ಬಾರಿ ಮೊದಲು ಇಲ್ಲಿಂದಲೇ ತನ್ನ ಚುನಾವಣಾ ರಣತಂತ್ರ ಹೆಣೆಯುವಲ್ಲಿ ಮುಂದಡಿ ಇಟ್ಟಿದೆ. ಹಿಂದೂ ಕಾರ್ಯಕರ್ತರ ಹತ್ಯೆವಿಷಯವನ್ನು ಗಂಭೀರವಾಗಿ ತೆಗೆದು ಕೊಂಡು ಹೋರಾಟ ನಡೆಸುವ ಮೂಲಕ ತನ್ನ ವೋಟ್ ಬ್ಯಾಂಕ್ ಗಟ್ಟಿಗೊಳಿಸುವ ಕೆಲಸಕ್ಕೆ ಕೈಹಾಕಿದೆ. ಅಲ್ಲದೆ, ಹಿಂದುತ್ವದ ಪ್ರಖರ ಪ್ರತಿಪಾದಕ ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಕೇಂದ್ರ ಮಂತ್ರಿಯನ್ನಾಗಿಯೂ ಮಾಡಿದೆ.

ಮೇಲಾಗಿ ಕಾಂಗ್ರೆಸ್ಸಿನಲ್ಲಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮತ್ತು ಕೆಲವರು ಬಿಜೆಪಿಗೆ ವಲಸೆ ಬಂದಿದ್ದಾರೆ. ಸಜ್ಜನ ರಾಜಕಾರಣಿ ಎಂದೇ ಗುರುತಿಸಿ ಕೊಂಡಿರುವ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರು ಬಿಜೆಪಿಗೆ ವಲಸೆ ಬರಲಿದ್ದಾರೆ ಎಂಬ ಗುಸು ಗುಸು ಕೂಡ ಇದೆ. ಹಾಗಂತ ಆಡಳಿತಾರೂಢ ಕಾಂಗ್ರೆಸ್ ಇಲ್ಲಿ ಸುಮ್ಮನೆ ಕುಳಿತಿಲ್ಲ. ಬಿಜೆಪಿಗೆ ಸರಿಯಾದ ಏಟು ನೀಡಲು ಪ್ರಯತ್ನಿಸಿದರೂ ತನ್ನ ಕೆಲವು ಸ್ಥಾನಗಳನ್ನು ಕಳೆದು ಕೊಳ್ಳುವ ಅಪಾಯದಲ್ಲಿದೆ. ಹಿಂದುತ್ವ ವಿರೋಧಿ ಅಲೆ ಕಾಂಗ್ರೆಸ್ಸಿಗೆ ತುಸು ಮುಳುವಾಗು ವುದು ಸ್ಪಷ್ಟವಾಗುತ್ತಿದೆ.

 ಮೇಲಾಗಿ ಈ ಭಾಗದ ಕೆಲವು ಕ್ಷೇತ್ರಗಳಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಮುಸ್ಲಿಮರನ್ನು ಸೆಳೆಯಲು ಎಸ್‌'ಡಿಪಿಐ ಕೂಡ ತೀವ್ರ ಪ್ರಯತ್ನ ನಡೆಸಿರುವುದರಿಂದ ಅದರ ಹೊಡೆತ ಕಾಂಗ್ರೆಸ್ಸಿಗೇ ಆಗುವ ನಿರೀಕ್ಷೆಯಿದೆ. ಇದೆಲ್ಲದರ ನಡುವೆ ಸಮೀಕ್ಷೆಯಲ್ಲಿ ಹೊರಬಿದ್ದಿರುವ ಪ್ರಮುಖ ಅಂಶ ಎಂದರೆ, ಇಲ್ಲಿ ಯಾವ ಪಕ್ಷಗಳನ್ನು ಬೆಂಬ ಲಿಸಬೇಕು ಎಂಬುದನ್ನು ನಿರ್ಧರಿಸದೇ ಇರುವ ಮತದಾರರ ಸಂಖ್ಯೆ ಕೇವಲ ಶೇ.2ರಷ್ಟು ಮಾತ್ರ. ಅಂದರೆ, ಬಹುತೇಕ ಮತದಾರರು ತೀರ್ಮಾನಕ್ಕೆ ಬಂದಿದ್ದಾರೆ. ಈ ಶೇ.2 ರಷ್ಟು ಮತಗಳು ಯಾವ ಕಡೆ ವಾಲಿದರೂ ಫಲಿತಾಂಶದಲ್ಲಿ ಪ್ರಮುಖ ಬದಲಾವಣೆ ಆಗಲಿಕ್ಕಿಲ್ಲ ಎಂಬುದು ಸಮೀಕ್ಷೆ.