ಮಂಡ್ಯ : ಸದ್ಯ ರಾಜ್ಯ ರಾಜಕಾರಣದಲ್ಲಿ ಆಂತರಿಕ ಕಲಹಗಳು ಹೆಚ್ಚಾಗುತ್ತಿವೆ. ಅತ್ತ ಮೈತ್ರಿ ಸರ್ಕಾರವನ್ನು ಉರುಳಿಸಲು ಸಾಕಷ್ಟು ಯತ್ನ ನಡೆಯುತ್ತಿದೆ ಎನ್ನುವ ಆರೋಪದ ನಡುವೆ ಬಿಜೆಪಿ ಮತ್ತೊಂದು ಭರ್ಜರಿ ಪ್ಲಾನ್ ನಡೆಸಿದೆ ಎನ್ನಲಾಗಿದೆ. 

ದೋಸ್ತಿ ಸರ್ಕಾರವನ್ನು ಉರುಳಿಸಲು ಮಾಜಿ ಕಾಂಗ್ರೆಸ್ ಮುಖಂಡ ಹಾಲಿ ಬಿಜೆಪಿ ನಾಯಕ ಎಸ್.ಎಂ ಕೃಷ್ಣ ಅವರನ್ನು ಅಖಾಡಕ್ಕೆ ಇಳಿಸಲು ಕಮಲ ಪಾಳಯ ನಿರ್ಧರಿಸಿದೆ ಎನ್ನುವ ಮಾತು ಕೇಳಿ ಬಂದಿದೆ. 

ಕೃಷ್ಣ ಅವರ ಬೆಂಬಲಿಗ ಶಾಸಕರನ್ನು ಬಿಜೆಪಿಗೆ ಕರೆತರಲು ಯತ್ನ ಆರಂಭ ಮಾಡಿದೆ. ಮಂಡ್ಯ ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ.  ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ   ಹಾಗೂ ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣ ಗೌಡಗೂ ಕೂಡ ಬಿಜೆಪಿ ಗಾಳ ಹಾಕಿದೆ. 

ಅತ್ತು ಕರೆದು ಜೆಡಿಎಸ್ ನಿಂದ ಈ ಬಾರಿ ಟಿಕೆಟ್ ಗಿಟ್ಟಿಸಿದ್ದ ನಾರಾಯಣ ಗೌಡ ಕೆ.ಆರ್ ಪೇಟೆಯಿಂದ ಗೆಲುವು ಸಾಧಿಸಿದ್ದರು. ಇದು ಯಡಿಯೂರಪ್ಪ ಅವರ ತವರು ಕ್ಷೇತ್ರವಾಗಿದ್ದು,  ಈ ಮೂಲಕ ಜೆಡಿಎಸ್ ಭದ್ರಕೋಟೆಗೆ ಬಿಜೆಪಿ ಕೈ ಹಾಕಿದೆ ಎನ್ನುವ ಮಾತು ಕೇಳಿ ಬಂದಿದೆ.