ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಸಮ್ಮಿಶ್ರ ಸರ್ಕಾರಕ್ಕೆ ಶನಿವಾರ ನಾಲ್ಕು ವರ್ಷ ಪೂರ್ಣಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ನಡೆಸಲಾದ ಸಮೀಕ್ಷೆಯೊಂದು ಬಿಜೆಪಿಯೊಂದೇ ಏಕಾಂಗಿಯಾಗಿ 318 ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಸಮ್ಮಿಶ್ರ ಸರ್ಕಾರಕ್ಕೆ ಶನಿವಾರ ನಾಲ್ಕು ವರ್ಷ ಪೂರ್ಣಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ನಡೆಸಲಾದ ಸಮೀಕ್ಷೆಯೊಂದು ಬಿಜೆಪಿಯೊಂದೇ ಏಕಾಂಗಿಯಾಗಿ 318 ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.
‘ಮೋದಿ ಸರ್ಕಾರಕ್ಕೆ 2014ರ ಜನಪ್ರಿಯತೆ ಇದೆಯಾ? ನಾಲ್ಕು ವರ್ಷಗಳ ಆಡಳಿತದ ಬಗ್ಗೆ ಜನತೆಗೆ ತೃಪ್ತಿ ಇದೆಯಾ?’ ಎಂಬ ಪ್ರಶ್ನೆಗಳ ಕುರಿತಂತೆ‘ಟೈಮ್ಸ್ ನೌ’ ಖಾಸಗಿ ಸುದ್ದಿ ವಾಹಿನಿಯು, ‘ಕ್ರೋಮ್ ಡಾಟಾ ಅನಾಲಿಟಿಕ್ಸ್ ಆ್ಯಂಡ್ ಮೀಡಿಯಾ’ ನಡೆಸಿದ ಸಮೀಕ್ಷೆಯನ್ನು ಪ್ರಕಟಿಸಿದ್ದು, ಬಿಜೆಪಿ 318 ಸ್ಥಾನ ಪಡೆಯಲಿದೆ ಎಂದು ಹೇಳಿದೆ. ‘ನಮೋ ಜನಪ್ರಿಯತೆ ಸಮೀಕ್ಷೆ’ಯಲ್ಲಿ ಎಂಟು ಪ್ರಶ್ನೆಗಳನ್ನು ಕೇಳಿ, ಮೋದಿ ಸರ್ಕಾರದ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಸಮೀಕ್ಷೆ ಪ್ರಕಾರ, 2018ರಲ್ಲಿ ಅಂದರೆ, ಈ ವರ್ಷವೇ ಚುನಾವಣೆ ನಡೆದರೆ 318 ಸ್ಥಾನಗಳನ್ನು ಗೆಲ್ಲಲಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ 2014ರಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದಿತ್ತು.
2019ರಲ್ಲಿ ಮೋದಿಯರವನ್ನು ಮತ್ತೆ ಪ್ರಧಾನಿಯಾಗಲು ಬಯಸುತ್ತೀರಾ? ಎಂಬ ಪ್ರಶ್ನೆಗೆ ಶೇ.53 ಮಂದಿ ಹೌದು ಎಂದಿದ್ದಾರೆ. ಇನ್ನುಳಿದಂತೆ ಶೇ.23 ರಾಹುಲ್ ಗಾಂಧಿ, ಶೇ.7 ಮಮತಾ ಬ್ಯಾನರ್ಜಿ, ಶೇ.6 ಅಖಿಲೇಶ್ ಯಾದವ್, ಶೇ.5 ಮಾಯಾವತಿ, ಶೇ.1 ಕೇಜ್ರಿವಾಲ್ ಮತ್ತು ಶೇ.3 ಮಂದಿ ಇತರರು ಪ್ರಧಾನಿಯಾಗಬಹುದು ಎಂದಿದ್ದಾರೆ. ಎನ್‌ಡಿಎಗೆ ಎರಡನೆ ಅವಧಿಗೆ ಅಧಿಕಾರ ನೀಡಬೇಕೇ? ಎಂಬ ಪ್ರಶ್ನೆಗೆ ಶೇ.55 ಮಂದಿ ಹೌದು, ಶೇ.45 ಮಂದಿ ಬೇಡ ಎಂದಿದ್ದಾರೆ.
