ಸಿಎಂ ಅಭ್ಯರ್ಥಿ ಇಲ್ಲದೆ ಚುನಾವಣೆ ಎದುರಿಸಲು ತಯಾರಿ | ರಾಜ್ಯದಲ್ಲಿ ಪಟೇಲ್ ಬಂಡಾಯ ಹತ್ತಿಕ್ಕುವ ಅನಿವಾರ್ಯತೆ | ತವರು ರಾಜ್ಯವಾದ ಕಾರಣ ಮೋದಿ, ಶಾಗೆ ಪ್ರತಿಷ್ಠೆಯ ಪ್ರಶ್ನೆ

ಅಹಮದಾಬಾದ್‌: ಪಂಚರಾಜ್ಯಗಳ ಚುನಾವಣೆ​ಯಲ್ಲಿ ಜಯಭೇರಿ ಬಾರಿಸಿದ ಹುಮ್ಮಸ್ಸಿನಲ್ಲಿರುವ ಬಿಜೆಪಿ, ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್‌ ವಿಧಾನಸಭೆ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಖ ಮುಂದಿಟ್ಟುಕೊಂಡೇ ಎದುರಿಸಲು ಉದ್ದೇಶಿಸಿದೆ.

ಗುಜರಾತ್‌ ಮಾದರಿ ಅಭಿವೃದ್ಧಿಯನ್ನೇ ಪಠಿಸುತ್ತಾ ಪ್ರಧಾನಿ ಹುದ್ದೆಗೇರಿದ ಮೋದಿ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಸಮರವಾಗಿದೆ. 22 ವರ್ಷಗಳಿಂದ ನಿರಂತ​ರವಾಗಿ ಅಧಿಕಾರದಲ್ಲಿರುವ ಬಿಜೆಪಿಗೆ ಗುಜರಾತಿನಲ್ಲಿ ಆಡಳಿತ ವಿರೋಧಿ ಅಲೆಯ ಬಿಸಿ ತಟ್ಟುವ ಸಾಧ್ಯತೆಯೂ ಇದೆ. ಜತೆಗೆ ಗುಜರಾತಿನ ಜನಸಮೂಹವನ್ನು ಸೆಳೆಯುವ ಪ್ರಬಲ ನಾಯಕರ ಕೊರತೆಯೂ ಇದೆ. ಹೀಗಾ​ಗಿ ಯಾರನ್ನೂ ಮುಖ್ಯಮಂತ್ರಿ ಅಭ್ಯ​ರ್ಥಿ ಎಂದು ಬಿಂಬಿಸದೇ ಮೋದಿ ಮುಖವನ್ನೇ ಮುಂದು ಮಾಡಿ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದು ಹಿರಿಯ ನಾಯಕರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಉತ್ತರಪ್ರದೇಶ, ಉತ್ತರಾ​ಖಂಡ ಸೇರಿದಂತೆ ಪಂಚರಾಜ್ಯ ಚುನಾವಣೆ​ಗಳಲ್ಲೂ ಬಿಜೆಪಿ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರಲಿಲ್ಲ. ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತವರು ರಾಜ್ಯವಾಗಿರುವ ಕಾರಣಕ್ಕೆ ಗುಜರಾತ್‌ ಚುನಾವಣೆ ಆ ಇಬ್ಬರೂ ನಾಯಕರ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.