ನವದೆಹಲಿ[ಮಾ.07]: ಬಿಜೆಪಿಯ ವರಿಷ್ಠ ನಾಯಕ ಎಲ್‌.ಕೆ.ಅಡ್ವಾಣಿ ಸೇರಿದಂತೆ 75 ವರ್ಷ ದಾಟಿದವರಿಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಶೀಘ್ರದಲ್ಲೇ ಪಕ್ಷದ ಪರಮೋಚ್ಚ ನಿರ್ಣಾಯಕ ಸಂಸ್ಥೆಯಾದ ಸಂಸದೀಯ ಮಂಡಳಿಯ ಸಭೆ ನಡೆಯಲಿದೆ. ಲೋಕಸಭೆಗೆ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಈ ಸಭೆ ನಡೆಯಲಿದ್ದು, ಅದರಲ್ಲಿ ವಯೋಮಿತಿಯ ಜೊತೆಗೆ ರಾಜ್ಯಸಭೆ ಸದಸ್ಯರಿಗೆ ಹಾಗೂ ರಾಜ್ಯಗಳ ವಿಧಾನಸಭೆ ಶಾಸಕರಿಗೆ ಟಿಕೆಟ್‌ ನೀಡಬೇಕೇ ಎಂಬ ಬಗ್ಗೆಯೂ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ಅದು ಲೋಕಸಭೆಗೆ ಸ್ಪರ್ಧಿಸುವುದಕ್ಕೆ ಅನ್ವಯಿಸುವುದಿಲ್ಲ ಎಂಬ ಸುಳಿವನ್ನು ಕಳೆದ ತಿಂಗಳು ಪಕ್ಷ ನೀಡಿದ್ದರೂ, ಈ ಬಗ್ಗೆ ಸ್ಪಷ್ಟನಿರ್ಧಾರವನ್ನು ಸಂಸದೀಯ ಮಂಡಳಿ ಕೈಗೊಳ್ಳಲಿದೆ. 75 ವರ್ಷ ದಾಟಿದವರಿಗೆ ಟಿಕೆಟ್‌ ನೀಡುವಂತಿಲ್ಲ ಎಂದು ನಿರ್ಧರಿಸಿದರೆ ಎಲ್‌.ಕೆ.ಅಡ್ವಾಣಿ (91), ಮುರಳಿ ಮನೋಹರ ಜೋಶಿ (85), ಸುಮಿತ್ರಾ ಮಹಾಜನ್‌ (76), ಭಗತ್‌ ಸಿಂಗ್‌ ಕೋಶ್ಯಾರಿ (76), ಬಿ.ಸಿ.ಖಂಡೂರಿ (84), ಕಲ್ರಾಜ್‌ ಮಿಶ್ರಾ (77), ಶಾಂತಕುಮಾರ್‌ (84), ಕರಿಯಾ ಮುಂಡಾ (82) ಹಾಗೂ ಹುಕುಮ್‌ದೇವ್‌ ನಾರಾಯಣ ಯಾದವ್‌ (79)ರಂತಹ ಜನಪ್ರಿಯ ಹಿರಿಯ ನಾಯಕರು ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ.

ಮೋದಿ ಅಧಿಕಾರಕ್ಕೆ ಬಂದ ನಂತರ 75 ವರ್ಷದ ನಿಯಮದ ಆಧಾರದಲ್ಲಿ ಗುಜರಾತ್‌ ಮುಖ್ಯಮಂತ್ರಿ ಆನಂದಿಬೆನ್‌ ಪಟೇಲ್‌, ಕೇಂದ್ರ ಸಚಿವರಾದ ನಜ್ಮಾ ಹೆಪ್ತುಲ್ಲಾ ಹಾಗೂ ಕಲ್ರಾಜ್‌ ಮಿಶ್ರಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಮುಂದಿನ ವಾರದಿಂದ ಸ್ಪರ್ಧಿಗಳ ಹೆಸರು ಪ್ರಕಟ:

ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವವರ ಹೆಸರನ್ನು ಪಕ್ಷವು ಮುಂದಿನ ವಾರದಿಂದ ಪ್ರಕಟಿಸಲಿದೆ ಎಂದು ಪಕ್ಷ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಸಂಸದೀಯ ಮಂಡಳಿಯ ಸಭೆಯಲ್ಲಿ ಸ್ಪರ್ಧೆಗೆ ಕೆಲ ಮಾನದಂಡಗಳನ್ನು ನಿಗದಿಪಡಿಸಿದ ನಂತರ ಅಧಿಕೃತವಾಗಿ ಸ್ಪರ್ಧಿಗಳ ಹೆಸರು ಪ್ರಕಟಿಸಲು ಆರಂಭಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನು, ರಾಜ್ಯಸಭೆ ಸದಸ್ಯರಿಗೆ ಟಿಕೆಟ್‌ ನೀಡಬೇಕೋ ಎಂಬುದು ನಿರ್ಧಾರವಾದ ನಂತರ ಕೇಂದ್ರದ ಕೆಲ ಪ್ರಮುಖ ನಾಯಕರ ಸ್ಪರ್ಧೆಯೂ ಅಂತಿಮಗೊಳ್ಳಲಿದೆ. ಮೋದಿ ಸರ್ಕಾರದ ಜನಪ್ರಿಯ ಸಚಿವರಲ್ಲಿ ಒಬ್ಬರಾದ ರವಿಶಂಕರ್‌ ಪ್ರಸಾದ್‌ ನಾಲ್ಕನೇ ಬಾರಿ ರಾಜ್ಯಸಭೆ ಸದಸ್ಯರಾಗಿದ್ದಾರೆ. ಅವರು ಬಿಹಾರದ ಪಟ್ನಾಸಾಹಿಬ್‌ ಕ್ಷೇತ್ರದಲ್ಲಿ ಶತ್ರುಘ್ನ ಸಿನ್ಹಾ ಬದಲು ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ರಾಜ್ಯಸಭೆ ಸದಸ್ಯೆಯಾಗಿದ್ದು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಅಮೇಠಿಯಿಂದ ಸ್ಪರ್ಧಿಸಿ ಸೋತಿದ್ದರು. ಈ ಬಾರಿಯೂ ಅಲ್ಲಿಂದಲೇ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ, ಮುಖ್ತಾರ್‌ ಅಬ್ಬಾಸ್‌ ನಖ್ವಿ, ವಿಜಯ್‌ ಗೋಯಲ್‌ ಮುಂತಾದವರು ಕೂಡ ರಾಜ್ಯಸಭೆ ಸದಸ್ಯರೇ ಆಗಿದ್ದು, ಲೋಕಸಭೆ ಟಿಕೆಟ್‌ನ ಆಕಾಂಕ್ಷಿಯಾಗಿದ್ದಾರೆ.

ಅದೇ ರೀತಿ, ಉತ್ತರ ಪ್ರದೇಶ, ಬಿಹಾರ, ಹರ್ಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಹಾಲಿ ಶಾಸಕರಲ್ಲಿ ಅನೇಕರು ಲೋಕಸಭೆಗೆ ಸ್ಪರ್ಧಿಸಲು ಆಕಾಂಕ್ಷಿಗಳಾಗಿದ್ದಾರೆ. ಈ ಎಲ್ಲ ಅಂಶಗಳ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.