ನವದೆಹಲಿ[ಡಿ.08]: ಹಿರಿಯ ವಕೀಲ ಹಾಗೂ ಬಿಜೆಪಿ ಮಾಜಿ ಮುಖಂಡ ರಾಮ್‌ ಜೇಠ್ಮಲಾನಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದ ಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಇದರಿಂದ ಬಿಜೆಪಿ ಮತ್ತು ರಾಮ್‌ ಜೇಠ್ಮಲಾನಿ ನಡುವಿನ ಕಾನೂನು ಸಮರ ಅಂತ್ಯವಾಗಿದೆ.

ತಮ್ಮ ನಡುವಿನ ಕಲಹವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಎಂದು ಬಿಜೆಪಿ ಮತ್ತು ರಾಮ್‌ ಜೇಠ್ಮಲಾನಿ ಅವರು ಸಲ್ಲಿಸಿದ್ದ ಜಂಟಿ ಅರ್ಜಿಗೆ ದೆಹಲಿ ನ್ಯಾಯಾಲಯ ಒಪ್ಪಿಗೆ ಸೂಚಿಸಿತು. ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ದೆಹಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುಮಿತ್‌ ದಾಸ್‌ ಅವರು ಗುರುವಾರ ಈ ಅರ್ಜಿಯನ್ನು ವಿಲೇವಾರಿ ಮಾಡಿದ್ದಾರೆ.

2013ರಲ್ಲಿ ತಮ್ಮನ್ನು ಪಕ್ಷದಿಂದ ಹೊರ ಹಾಕಿದ್ದ ಬಿಜೆಪಿ ವಿರುದ್ಧ ರಾಮ್‌ ಜೇಠ್ಮಲಾನಿ ಅವರು ಕಾನೂನಿನ ಮೊರೆ ಹೋಗಿದ್ದರು. ಅಲ್ಲದೆ, ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ 50 ಲಕ್ಷ ಪರಿಹಾರ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದರು.