ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರು ಹಿನ್ನೆಲೆಯಲ್ಲಿ ಪ್ರಾದೇಶಿಕವಾರು ಪ್ರಣಾಳಿಕೆ ರೂಪಿಸಲು ಮುಂದಾಗಿರುವ ಕಾಂಗ್ರೆಸ್ ತಂತ್ರಕ್ಕೆ ಭಾರತೀಯ ಜನತಾ ಪಾರ್ಟಿ ಪ್ರತಿತಂತ್ರ ಹೆಣೆದಿದೆ. ಚುನಾವಣಾ ಪ್ರಣಾಳಿಕೆ ಬಿಡುಗಡೆಗೂ ಮುನ್ನವೇ ಜನರು ಯಾವ ರೀತಿಯ ಸರ್ಕಾರವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿಯಲು ಮುಂದಾಗಿದ್ದು ಇದೇ ಮೊದಲ ಬಾರಿಗೆ ‘ಪ್ರಣಾಳಿಕೆ ಪೂರ್ವ ಅಭಿಯಾನ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರು ಹಿನ್ನೆಲೆಯಲ್ಲಿ ಪ್ರಾದೇಶಿಕವಾರು ಪ್ರಣಾಳಿಕೆ ರೂಪಿಸಲು ಮುಂದಾಗಿರುವ ಕಾಂಗ್ರೆಸ್ ತಂತ್ರಕ್ಕೆ ಭಾರತೀಯ ಜನತಾ ಪಾರ್ಟಿ ಪ್ರತಿತಂತ್ರ ಹೆಣೆದಿದೆ. ಚುನಾವಣಾ ಪ್ರಣಾಳಿಕೆ ಬಿಡುಗಡೆಗೂ ಮುನ್ನವೇ ಜನರು ಯಾವ ರೀತಿಯ ಸರ್ಕಾರವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿಯಲು ಮುಂದಾಗಿದ್ದು ಇದೇ ಮೊದಲ ಬಾರಿಗೆ ‘ಪ್ರಣಾಳಿಕೆ ಪೂರ್ವ ಅಭಿಯಾನ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.
ನಗರದ ಬಿಎಂಎಸ್ ಕಾಲೇಜಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಸವನಗುಡಿ ಕ್ಷೇತ್ರದ ಅಭಿಪ್ರಾಯ ಸಂಗ್ರಹಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವ, ರಾಜ್ಯ ಬಿಜೆಪಿ ಚುನಾವಣಾ ಪ್ರಭಾರಿ ಪ್ರಕಾಶ್ ಜಾವಡೇಕರ್ ಚಾಲನೆ ನೀಡಿದರು.
ಇದೇ ರೀತಿ ರಾಜ್ಯದ 224 ವಿಧಾನಸಭಾ ಕ್ಷೇತ್ರ, 30 ಜಿಲ್ಲಾ ಕೇಂದ್ರ ಹಾಗೂ ಆರೋಗ್ಯ, ಐಟಿ-ಬಿಟಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ 40 ವಲಯಗಳಿಂದ ಮಾಹಿತಿ ಕಲೆಹಾಕುತ್ತಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರೂ ಆಗಿರುವ ‘ಪ್ರಣಾಳಿಕೆ ಪೂರ್ವ ಅಭಿಯಾನ’ದ ಸಂಚಾಲಕ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ, ‘ನವ ಕರ್ನಾಟಕ ನಿರ್ಮಾಣಕ್ಕಾಗಿ ಜನಪರ ಶಕ್ತಿಯನ್ನು ಕಲೆಹಾಕಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿರುವ ಜನರು ತಮ್ಮಲ್ಲಿರುವ ಚಿಂತನೆಗಳನ್ನು ಹಂಚಿಕೊಳ್ಳಲು ವೇದಿಕೆಯಾಗಿದೆ. ಸಂಗ್ರಹಿಸಿದ ಮಾಹಿತಿಯನ್ನು ಯಾವ ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನವಭಾರತ ನಿರ್ಮಾಣಕ್ಕೆ ಮುಂದಾಗಿದ್ದು, ರಾಜ್ಯದಲ್ಲಿ ನವ ಕರ್ನಾಟಕ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಅಭಿಯಾನದಲ್ಲಿ ಜನರು ಸ್ವಯಂ ಪ್ರೇರಿತವಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುವದರ ಜತೆಗೆ ಪತ್ರದ ಮೂಲಕ ಬರೆದು ಕಳುಹಿಸಬಹುದು ಎಂದು ತಿಳಿಸಿದರು. ಇದೇ ವೇಳೆ ಹಲವಾರು ತಮ್ಮಲ್ಲಿರುವ ಹೊಸ ಆಲೋಚನೆಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಮೆಟ್ರೋ ರೈಲು ನಿಲ್ದಾಣಗಳಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆ, ಮುಜರಾಯಿ ಇಲಾಖೆಗೆ ಮಸೀದಿ, ಚರ್ಚ್‌ಗಳ ಸೇರ್ಪಡೆ, ರಾಜ್ಯದಲ್ಲಿಯೂ ಗೋಹತ್ಯೆ ನಿಷೇಧ ಸೇರಿದಂತೆ ಹಲವಾರು ಅಭಿಪ್ರಾಯಗಳನ್ನು ನಾಗರಿಕರು ತಿಳಿಸಿದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, ಸಂಸದ ಪಿ.ಸಿ.ಮೋಹನ್, ಶಾಸಕ ರವಿ ಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು.
