ಬೆಂಗಳೂರು[ಮಾ.07]: ಉದ್ದ ತಿಲಕ ಇಟ್ಟವರನ್ನು ಕಂಡರೆ ತಮಗೆ ಭಯ ಎಂಬ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡುವ ಸಂಬಂಧ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ತಾವು ತಿಲಕ ಇಟ್ಟುಕೊಂಡಿರುವ ಫೋಟೋ ಟ್ವೀಟ್‌ ಮಾಡಿದ್ದಾರೆ.

#SelfieWithTilak ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ಅವರು, ಇದೊಂದು ಹತಾಶೆಯ ಹೇಳಿಕೆ. ಕಾಂಗ್ರೆಸ್‌ ನಾಯಕರಲ್ಲಿ ಸಭ್ಯತೆಯಾಗಲಿ ಅಥವಾ ನಾಚಿಕೆಯಾಗಲಿ ಉಳಿದಿಲ್ಲ. ತಿಲಕ ಇಟ್ಟುಕೊಳ್ಳುವುದಕ್ಕೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ಅದು ಭಾರತೀಯ ಸಂಸ್ಕೃತಿಯ ಭಾಗ ಅಷ್ಟೆ. ನನಗೆ ಅದರ ಬಗ್ಗೆ ಹೆಮ್ಮೆಯಿದೆ ಎಂದು ಶೋಭಾ ಹೇಳಿದ್ದಾರೆ.

ಬಿಜೆಪಿಯ ಇತರ ಹಲವು ಮುಖಂಡರೂ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಖಂಡಿಸಿದ್ದಾರೆ. ಶೋಭಾ ಟ್ವೀಟ್‌ನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ವಿತ್‌ ತಿಲಕ ಅಭಿಯಾನವೇ ಆರಂಭವಾಗಿದ್ದು, ನೂರಾರು ಜನರು ತಾವು ತಿಲಕ ಇಟ್ಟುಕೊಂಡಿರುವುದರ ಸೆಲ್ಫಿ ತೆಗೆದು ಅಪ್‌ಲೋಡ್‌ ಮಾಡತೊಡಗಿದ್ದಾರೆ.