ಬೆಂಗಳೂರು (ಆ. 29): ‘ಜನರು ಆಶೀರ್ವದಿಸಿದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ’ ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿದ್ದ ಮಾತುಗಳನ್ನು ಮುಂದಿಟ್ಟುಕೊಂಡು ಇದೀಗ ಪ್ರತಿಪಕ್ಷ ಬಿಜೆಪಿ ಸರ್ಕಾರದ ಭವಿಷ್ಯದ ಬಗ್ಗೆಯೇ ಪ್ರಶ್ನೆ ಎತ್ತಿದೆ.

ಈ ಸರ್ಕಾರಕ್ಕೆ ಹೆಚ್ಚು ದಿನ ಆಯಸ್ಸು ಇಲ್ಲ, ಸಿದ್ದರಾಮಯ್ಯ ಅವರಿಂದಾಗಿಯೇ ಸರ್ಕಾರ ಪತನವಾಗಲಿದೆ ಎನ್ನುತ್ತಿರುವ ಬಿಜೆಪಿ ನಾಯಕರು, ತಾವಂತೂ ಸರ್ಕಾರ ಬೀಳಿಸುವುದಿಲ್ಲ ಎಂಬ ಸ್ಪಷ್ಟನೆಯನ್ನೂ ಕೊಡುತ್ತಿದ್ದಾರೆ. ಈ ನಡುವೆಯೇ ಸಿದ್ದರಾಮಯ್ಯ ಸರ್ಕಾರ ಬೀಳಿಸುವುದಿಲ್ಲ, ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ಸಿಗರು ಸ್ಪಷ್ಟನೆ ನೀಡುತ್ತಿದ್ದಾರೆ. ಜೆಡಿಎಸ್‌ ನಾಯಕರು ಮುಗುಮ್ಮಾಗಿದ್ದಾರೆ.

ಸರ್ಕಾರ ಅಸ್ಥಿರಗೊಳಿಸುತ್ತಿಲ್ಲ :

ನಾವು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿಲ್ಲ. ಎಲ್ಲವನ್ನೂ ಶಾಂತವಾಗಿ ಕಾದು ನೋಡುತ್ತೇವೆ. ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವಿನ ಗೊಂದಲ ಅವರಿಗೆ ಬಿಟ್ಟದ್ದು. ಉಭಯ ಪಕ್ಷಗಳ ಮುಖಂಡರು ಬಡಿದಾಡಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರತಿನಿತ್ಯ ಧಾರಾವಾಹಿ ರೀತಿ ಸುದ್ದಿ ಬರುತ್ತಿದೆ. ಆ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ.

-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ