ಬೆಂಗಳೂರು (ಆ. 04): ಬಿಜೆಪಿಗೆ 50 ಲಕ್ಷ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಸುವ ಗುರಿ ಹೊಂದಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಿಂದ 50 ಜನರನ್ನು ಸದಸ್ಯರನ್ನಾಗಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ನಗರದ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಅವಧಿಯಲ್ಲಿ 80 ಲಕ್ಷ ಜನರನ್ನು ಸದಸ್ಯರನ್ನಾಗಿ ಮಾಡಲಾಗಿತ್ತು. ಪ್ರಸಕ್ತ 50 ಲಕ್ಷ ಸದಸ್ಯರನ್ನು ಮಾಡಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ 12 ಲಕ್ಷ ಸದಸ್ಯರ ನೋಂದಣಿ ಮಾಡಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಸಾವಿರ, ಪ್ರತಿ ಬೂತ್‌ ಮಟ್ಟದಲ್ಲಿ 100 ಜನ ಸದಸ್ಯರನ್ನಾಗಿ ಮಾಡಬೇಕಾಗಿದೆ ಎಂದು ತಿಳಿಸಿದ ಅವರು, ಆಗಸ್ಟ್‌ 3ರಿಂದ ಎರಡು ದಿನ ಮತ್ತು 10ರಿಂದ ಎರಡು ದಿನ ನಡೆಯುವ ಸದಸ್ಯತ್ವ ಅಭಿಯಾನದಲ್ಲಿ ಪಕ್ಷದಿಂದ ಆಯ್ಕೆಯಾಗಿರುವ ಶಾಸಕರು, ಸಂಸತ್‌ ಸದಸ್ಯರು ಸೇರಿದಂತೆ ಎಲ್ಲ ಕಾರ್ಯಕರ್ತರು ಭಾಗವಹಿಸಬೇಕು. ಆ ಮೂಲಕ ಸಂಘಟಕರಾಗಿ ಮುಂಬರುವ ಚುನಾವಣೆಗಳನ್ನು ಯಶಸ್ವಿಯಾಗಿ ಗೆಲ್ಲಬೇಕು ಎಂದು ತಿಳಿಸಿದರು.