ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ.ಅಡ್ವಾಣಿ ಶುಕ್ರವಾರ ನಗರಕ್ಕೆ ಬಂದ ವೇಳೆ ವಿಮಾನ ನಿಲ್ದಾಣದಲ್ಲಿ ರಾಜ್ಯದ ಪ್ರಮುಖ ನಾಯಕರು ಸ್ವಾಗತಿಸದೇ ಇರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು (ಅ.21): ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ.ಅಡ್ವಾಣಿ ಶುಕ್ರವಾರ ನಗರಕ್ಕೆ ಬಂದ ವೇಳೆ ವಿಮಾನ ನಿಲ್ದಾಣದಲ್ಲಿ ರಾಜ್ಯದ ಪ್ರಮುಖ ನಾಯಕರು ಸ್ವಾಗತಿಸದೇ ಇರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಶುಕ್ರವಾರ ಮಧ್ಯಾಹ್ನ ೩ ಗಂಟೆ ವೇಳೆಗೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಡ್ವಾಣಿ ಅವರನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಹಾಗೂ ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ ಅವರು ಮಾತ್ರ ಬರಮಾಡಿಕೊಂಡರು. ಈ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ರಾಜ್ಯದ ಯಾವುದೇ ಪ್ರಮುಖ ನಾಯಕರು ಇಲ್ಲದಿರುವುದು ಅಚ್ಚರಿ ಮೂಡಿಸಿದೆ.
ಬಳಿಕ ೪.೧೫ರ ವೇಳೆಗೆ ಅರಮನೆಯ ರಸ್ತೆಯ ಖಾಸಗಿ ಹೊಟೆಲ್‌ವೊಂದಕ್ಕೆ ತಂಗಲು ಅಡ್ವಾಣಿ ಅವರು ಬಂದಿಳಿದಾಗಲೂ ಅವರನ್ನು ಸ್ವಾಗತಿಸಲು ಯಾರೂ ಇರಲಿಲ್ಲ. ಹೀಗಾಗಿ ಒಂದು ಕಾಲದ ಅಗ್ರಗಣ್ಯ ನಾಯಕ ಅಡ್ವಾಣಿ ಸುಮಾರು ಒಂದು ಗಂಟೆಗಳ ಕಾಲ ತಮ್ಮ ಸಿಬ್ಬಂದಿ ಹಾಗೂ ಶಾಸಕರಾದ ಲಿಂಬಾವಳಿ ಮತ್ತು ರಾಮಚಂದ್ರಗೌಡರೊಂದಿಗೆ ಇದ್ದರು.
ಅಡ್ವಾಣಿಯವನ್ನು ಸ್ವಾಗತಿಸಲು ಯಾವುದೇ ನಾಯಕರು ಹಾಜರಿರಲಿಲ್ಲ ಎಂಬ ಸುದ್ದಿ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಸದಾನಂದಗೌಡ ಪ್ರತ್ಯೇಕವಾಗಿ ಹೊಟೆಲ್‌ಗೆ ಧಾವಿಸಿ, ಶುಭ ಕೋರಿದರು.
ನಂತರ ಸಂಜೆ ೬ ಗಂಟೆಗೆ ಶ್ರೀರಾಮಪುರದಲ್ಲಿ ಇತ್ತೀಚೆಗೆ ನಿಧನರಾದ ಆರ್‌ಎಸ್‌ಎಸ್ ಮುಖಂಡ ಗೋಪಿನಾಥ್ ಅವರ ನಿವಾಸಕ್ಕೆ ಅಡ್ವಾಣಿ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಯಡಿಯೂರಪ್ಪ ಕೂಡ ಹಾಜರಿದ್ದರು.
ನಗರಕ್ಕೆ ಆಗಮಿಸಿದ ಅಡ್ವಾಣಿ ಅವರನ್ನು ಪಕ್ಷದ ಮುಖಂಡರು ಬರಮಾಡಿಕೊಳ್ಳಲಿಲ್ಲ ಎಂಬ ವರದಿಗೆ ಸ್ಪಷ್ಟನೆ ನೀಡಿರುವ ರಾಜ್ಯ ಬಿಜೆಪಿ ಉನ್ನತ ಮೂಲಗಳು, ‘‘ಅಡ್ವಾಣಿಜೀ ಅವರನ್ನು ಬರಮಾಡಿಕೊಳ್ಳಲು ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಮತ್ತು ಹಿರಿಯ ಮುಖಂಡ ರಾಮಚಂದ್ರಗೌಡ ಅವರನ್ನು ನಿಯೋಜಿಸಲಾಗಿತ್ತು. ನಂತರ ಯಡಿಯೂರಪ್ಪ ಅವರನ್ನು ಹೊಟೆಲ್‌ನಲ್ಲಿ ಬರಮಾಡಿಕೊಂಡಿದ್ದಾರೆ. ಹೀಗಾಗಿ ಯಾವುದೇ ನಿರ್ಲಕ್ಷ್ಯ ಮಾಡಿಲ್ಲ’’ ಎಂದು ಸ್ಪಷ್ಟಪಡಿಸಿದೆ.
ಆದರೆ ಹೆಸರು ಹೇಳಲಿಚ್ಛಿಸದ ಪಕ್ಷದ ಮುಖಂಡರೊಬ್ಬರು, ‘‘ಇವತ್ತು ಮೋದಿ ಅವರಿಗೆ ಸಿಗುತ್ತಿರುವ ಗೌರವ ಹಿಂದೆ ಅಡ್ವಾಣಿ ಅವರಿಗೆ ನೀಡಲಾಗುತ್ತಿತ್ತು. ಹೀಗಾಗಿ ಪಕ್ಷದ ರಾಜ್ಯಾಧ್ಯಕ್ಷರು ಹಿರಿಯ ಮುಖಂಡರು ಬಂದಾಗ ಹೋಗಿ ಬರಮಾಡಿಕೊಳ್ಳುವುದು ಸಂಪ್ರದಾಯ. ಯಡಿಯೂರಪ್ಪ ಅವರು ಇವತ್ತು ಬೆಂಗಳೂರಿನಲ್ಲಿ ಲಭ್ಯರಿದ್ದರೆ ಹೋಗಿ ಬರಮಾಡಿಕೊಳ್ಳಬೇಕಿತ್ತು. ತುರ್ತು ಕಾರ‌್ಯ ಇದ್ದಾಗ ಹೋಗಲು ಆಗುವುದಿಲ್ಲ. ಹೀಗಾಗಿ ನಂತರ ಹೊಟೆಲ್‌ಗೆ ಹೋಗಿ ಭೇಟಿ ಮಾಡಿದ್ದಾರೆ. ಇದನ್ನು ಯಾರು ಹೇಗೆ ಬೇಕಾದರೂ ಅರ್ಥೈಸಬಹುದು’’ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿರಿಯ ನಾಯಕ ಅಡ್ವಾಣಿ ಅ.೨೨ರಂದು ಶನಿವಾರ ಬೆಳಗ್ಗೆ ೯ಕ್ಕೆ ನಗರದ ಎಚ್‌ಎಎಲ್ ಹೆಲಿಕಾಪ್ಟರ್ ನಿರ್ಮಾಣ ವಿಭಾಗಕ್ಕೆ ಭೇಟಿ ನೀಡಿ, ವೀಕ್ಷಿಸುವರು. ನಂತರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ ೭ಕ್ಕೆ ದೆಹಲಿಗೆ ವಾಪಸ್ ತೆರಳುವರು.
‘‘ಮಧ್ಯಾಹ್ನ ಪಕ್ಷದ ಕಚೇರಿಗೆ ಹೋದಾಗ ಅಡ್ವಾಣಿಜೀ ಬರುವ ವಿಚಾರ ಗೊತ್ತಾಯಿತು. ಹೀಗಾಗಿ ಸಂಜೆ ಅವರು ತಂಗಿದ್ದ ಹೊಟೆಲ್‌ಗೆ ತೆರಳಿ ಭೇಟಿ ಮಾಡಲು ತೆರಳಿದ್ದೆ. ಆ ವೇಳೆ ಅಡ್ವಾಣಿ ಅವರು ಶ್ರೀರಾಂಪುರಕ್ಕೆ ಮುಖಂಡರೊಬ್ಬರ ನಿವಾಸಕ್ಕೆ ಭೇಟಿ ನೀಡಲು ತೆರಳಿದ್ದರು. ಅವರು ವಾಪಸಾದ ನಂತರ ಮಾಜಿ ಸಚಿವ ಸುರೇಶ್‌ಕುಮಾರ್ ಅವರೊಂದಿಗೆ ಭೇಟಿ ಮಾಡಿ ಬಂದೆ’’
-ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ‌್ಯದರ್ಶಿ
‘‘ಹಿರಿಯ ಮುಖಂಡ ಅಡ್ವಾಣಿ ಅವರನ್ನು ಸ್ವಾಗತಿಸಲು ಪಕ್ಷದಿಂದ ನನ್ನನ್ನು ಹಾಗೂ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಅವರನ್ನು ನಿಯೋಜಿಸಿತ್ತು. ಹೀಗಾಗಿ ಇಬ್ಬರೂ ವಿಮಾನ ನಿಲ್ದಾಣಕ್ಕೆ ಹೋಗಿ ಸ್ವಾಗತಿಸಿ, ಹೊಟೆಲ್‌ಗೆ ಕರೆತಂದಿದ್ದೇವೆ. ನಂತರ ಪಕ್ಷದ ರಾಜ್ಯ ಮುಖಂಡರು ಹೊಟೆಲ್‌ಗೆ ಬಂದು ಅಡ್ವಾಣಿ ಅವರನ್ನು ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದರು’’
-ರಾಮಚಂದ್ರಗೌಡ, ವಿಧಾನ ಪರಿಷತ್ ಸದಸ್ಯ
