ಬಿಜೆಪಿಯಿಂದ ಮುಂದಿನ ಚುನಾವಣೆಗೆ ಸಮರ್ಥ ಅಭ್ಯರ್ಥಿಗಳಿಗಾಗಿ ಶೋಧ

First Published 10, Feb 2018, 8:41 AM IST
BJP Search Special Candidate Contest Election
Highlights

ವಿಧಾನಸಭೆ ಸ್ಪೀಕರ್‌ ಕೆ.ಬಿ.ಕೋಳಿವಾಡ ಅವರನ್ನು ಸೋಲಿಸಬಲ್ಲ ಸಮರ್ಥ ಅಭ್ಯರ್ಥಿಗಳಿಗಾಗಿ ತಡಕಾಡುತ್ತಿರುವ ಬಿಜೆಪಿ ನಾಯಕರು ಯಾರನ್ನು ಕಣಕ್ಕಿಳಿಸಬೇಕು ಎಂಬ ಜಿಜ್ಞಾಸೆಯಲ್ಲಿ ತೊಡಗಿದ್ದಾರೆ.

ಬೆಂಗಳೂರು : ವಿಧಾನಸಭೆ ಸ್ಪೀಕರ್‌ ಕೆ.ಬಿ.ಕೋಳಿವಾಡ ಅವರನ್ನು ಸೋಲಿಸಬಲ್ಲ ಸಮರ್ಥ ಅಭ್ಯರ್ಥಿಗಳಿಗಾಗಿ ತಡಕಾಡುತ್ತಿರುವ ಬಿಜೆಪಿ ನಾಯಕರು ಯಾರನ್ನು ಕಣಕ್ಕಿಳಿಸಬೇಕು ಎಂಬ ಜಿಜ್ಞಾಸೆಯಲ್ಲಿ ತೊಡಗಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಹಾಗೂ ಹಾಲಿ ಶಿಕಾರಿಪುರದ ಶಾಸಕ ಬಿ.ವೈ.ರಾಘವೇಂದ್ರ ಅವರು ಈ ಬಾರಿ ತಂದೆಗಾಗಿ ಕ್ಷೇತ್ರ ಬದಲಿಸಿ ರಾಣೆಬೆನ್ನೂರಿನಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ದಟ್ಟವಾಗಿತ್ತು. ಆದರೆ, ಇತ್ತೀಚೆಗೆ ರಾಘವೇಂದ್ರ ಅವರು ರಾಣೆಬೆನ್ನೂರಿನಿಂದ ಸ್ಪರ್ಧಿಸುವ ಸಂಭವ ಕ್ಷೀಣಿಸಿದೆ. ಹೀಗಾಗಿ, ಪರ್ಯಾಯ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ.

ಯಡಿಯೂರಪ್ಪ ಅವರು ಶಿಕಾರಿಪುರದ ಅಭ್ಯರ್ಥಿಯಾಗಿ ರಾಜ್ಯಾದ್ಯಂತ ಸುತ್ತಾಟ ನಡೆಸಬೇಕಿರುವುದರಿಂದ ಕ್ಷೇತ್ರದ ಜವಾಬ್ದಾರಿಯನ್ನು ರಾಘವೇಂದ್ರ ಅವರಿಗೆ ವಹಿಸಲು ತೀರ್ಮಾನಿಸಿದ್ದಾರೆ. ಒಂದು ವೇಳೆ ರಾಘವೇಂದ್ರ ಅವರು ರಾಣೆಬೆನ್ನೂರಿನಿಂದ ಸ್ಪರ್ಧಿಸಿದಲ್ಲಿ ಶಿಕಾರಿಪುರ ಕೈಬಿಟ್ಟು ಹೋದೀತು ಎಂಬ ಆತಂಕವೂ ಯಡಿಯೂರಪ್ಪ ಮತ್ತವರ ಆಪ್ತರನ್ನು ಕಾಡುತ್ತಿದೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೇ ಸೋಲು ಅನುಭವಿಸಿದ ಕಹಿ ನೆನಪು ಯಡಿಯೂರಪ್ಪ ಆಪ್ತರಲ್ಲಿದೆ. ಹೀಗಾಗಿ, ‘ರಿಸ್ಕ್‌’ ತೆಗೆದುಕೊಳ್ಳುವುದು ಬೇಡ ಎಂಬ ಸಲಹೆಯನ್ನು ಯಡಿಯೂರಪ್ಪ ಅವರಿಗೆ ನೀಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಒಂದು ವೇಳೆ ಯಡಿಯೂರಪ್ಪ ಅವರು ಗೆದ್ದು ಸರ್ಕಾರ ರಚಿಸಬೇಕಾದಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆಗ ಬೇಕಾದರೆ ರಾಘವೇಂದ್ರ ಅವರನ್ನು ಲೋಕಸಭೆಗೆ ಕಣಕ್ಕಿಳಿಸಿದರಾಯಿತು ಎಂಬ ನಿಲುವಿಗೆ ಬರಲಾಗಿದೆ.

ಉದಾಸಿ ಮಗಳು ಕಣಕ್ಕೆ?: ರಾಣೆಬೆನ್ನೂರಿನಲ್ಲಿ ಹಿಂದೆ ಶಾಸಕರಾಗಿದ್ದ ಶಿವಣ್ಣ ಅವರು ನಿಧನ ಹೊಂದಿರುವುದರಿಂದ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಯ ಕೊರತೆ ಎದುರಾಗಿದೆ. ಶಿವಣ್ಣ ಅವರ ಸೊಸೆ ಮಾಜಿ ಸಚಿವ ಸಿ.ಎಂ.ಉದಾಸಿ ಅವರ ಮಗಳು. ಹೀಗಾಗಿ ಶಿವಣ್ಣ ಅವರ ಸೊಸೆ ಅಥವಾ ಪತ್ನಿಯನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಚಿಂತನೆಯೂ ನಡೆದಿದೆ. ಉದಾಸಿ ಅವರ ಈ ಬಗ್ಗೆ ಆಸೆಯಿದೆ. ಆದರೆ, ತಮ್ಮ ಪುತ್ರ ಶಿವಕುಮಾರ್‌ ಹಾಲಿ ಸಂಸದರಾಗಿದ್ದಾರೆ. ಜತೆಗೆ ತಾವು ಹಾನಗಲ್‌ ಕ್ಷೇತ್ರದಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಹೀಗಿರುವಾಗ ಪುತ್ರಿಗೂ ಟಿಕೆಟ್‌ ಕೇಳುವುದು ಹೇಗೆ ಎಂಬ ಜಿಜ್ಞಾಸೆಯಲ್ಲಿದ್ದಾರೆ. ಶಿವಣ್ಣ ಪತ್ನಿಯನ್ನು ಕಣಕ್ಕಿಳಿಸಿದಲ್ಲಿ ಗೆಲುವಿನ ಸಾಧ್ಯತೆ ಹೆಚ್ಚಿದೆ ಎಂಬ ಮಾತನ್ನು ಸ್ಥಳೀಯ ಮುಖಂಡರು ಪ್ರತಿಪಾದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ನಡುವೆ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಹೆಚ್ಚು ಮತ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದ ಬೆಂಗಳೂರಿನ ಮಾಜಿ ಉಪಮೇಯರ್‌ ಕೆ. ಶಂಕರ್‌ ಅವರನ್ನು ಪಕ್ಷಕ್ಕೆ ಕರೆತಂದು ಕಣಕ್ಕಿಳಿಸಿದಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಶಂಕರ್‌ ಕುರುಬ ಸಮುದಾಯಕ್ಕೆ ಸೇರಿರುವುದರಿಂದ ಆ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಇದರಿಂದ ಜಾತಿ ಸಮೀಕರಣವನ್ನೂ ಸರಿದೂಗಿಸಿದಂತಾಗುತ್ತದೆ ಎಂಬ ಅಭಿಪ್ರಾಯವನ್ನು ಪಕ್ಷದ ಹಿರಿಯ ಮುಖಂಡರು ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಳಿ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

loader