ಗುವಾಹಟಿ[ಜ.11]: ದೇಶದಲ್ಲಿ 2014ರ ಲೋಕಸಭಾ ಚುನಾವಣೆ ಹಾಗೂ 2016ರ ವಿಧಾನಸಭಾ ಚುನಾವಣೆಗಳಲ್ಲಿ ವಿದೇಶಿಗರ ಅಕ್ರಮ ಪ್ರವೇಶ ವಿಚಾರವನ್ನು ಬಹುದೊಡ್ಡ ರಾಜಕೀಯ ವಿಚಾರವನ್ನಾಗಿ ಬಿಂಬಿಸಿದ್ದ ಬಿಜೆಪಿಯು ಸದ್ಯ ಯೂ ಟರ್ನ್ ಹೊಡೆದಿದೆ. ಬಾಂಗ್ಲಾ ನಿವಾಸಿಗರು, ದೇಶಕ್ಕೆ ಅಕ್ರಮವಾಗಿ ಪ್ರವೆಶಿಸಿದ್ದಾರೆ ಎಂದಿದ್ದ ಕಮಲ ಪಾಳಯ ಇದೀಗ ಕಳೆದ 10 ವರ್ಷಗಳಿಂದ ಬಾಂಗ್ಲಾ ನಿವಾಸಿಗರಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯೂ ಭಾರತಕ್ಕೆ ಅಕ್ರಮವಾಗಿ ನುಸುಳಿಲ್ಲ ಎಂದಿದೆ. ಗುವಾಹಟಿಯಲ್ಲಿ ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡಿದ ಬಿಜೆಪಿ ವಕ್ತಾರರು ಪೌರತ್ವ ತಿದ್ದುಪಡಿ ಮಸೂದೆಯಿಂದ ಇನ್ಮುಂದೆ ನಡೆಯುವ ಅಕ್ರಮ ನುಸುಳುವಿಕೆಯನ್ನು ತಡೆಯಬಹುದು ಎಂದಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಬಿಜೆಪಿ ವಕ್ತಾರ ಸ್ವಪ್ನಿಲ್ ಬರುವಾ "ಕಳೆದ 10 ವರ್ಷಗಳಲ್ಲಿ ಕ್ರಮ ನುಸುಳುವಿಕೆ ನಡೆದಿಲ್ಲ. ಅಕ್ರಮ ಪ್ರವೇಶ 10 ವರ್ಷದ ಮೊದಲು ನಡೆಯುತ್ತಿತ್ತು. ಆರ್ಥಿಕ ಕಾರಣದಿಂದ ಬಾಂಗ್ಲಾ ನಿವಾಸಿಗರು ಭಾರತಕ್ಕೆ ನುಸುಳದೆ, ಯೂರೋಪ್, ಅರಬ್ ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕೆ ತೆರಳುತ್ತಿದ್ದಾರೆ " ಎಂದಿದ್ದಾರೆ. 

ಇಷ್ಟೇ ಅಲ್ಲದೇ 'ಯೂರೋಪ್ ಹಾಗೂ ಅರಬ್ ನಂತಹ ರಾಷ್ಟ್ರಗಳಲ್ಲಿ ಅವರು ಪ್ರತಿ ದಿನ ಕನಿಷ್ವೆಂದರೂ 3 ಸಾವಿರ ರೂಪಾಯಿ ಸಂಪಾದಿಸುತ್ತಾರೆ. ಭಾರತದಲ್ಲಿ ಅವರು ಗರಿಷ್ವೆಂದರೆ 1 ಸಾವಿರ ರೂಪಾಯಿ ಸಂಪಾದಿಸಬಹುದು. ಹೀಗಿರುವಾಗ ಅವರೇಕೆ ನಮ್ಮ ದೇಶಕ್ಕೆ ನುಸುಳುತ್ತಾರೆ?' ಎಂದು ಪ್ರಶ್ನಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಮಾತನಾಡಿದ ಮತ್ತೊಬ್ಬ ವಕ್ತಾರ ಮೋಮಿನುಲ್ ಅವಾಲ್ "ಪೌರತ್ವ ಮಸೂದೆ ಜಾರಿಯಾದರೆ ಯಾವೊಬ್ಬ ಹಿಂದೂ ಬಾಂಗ್ಲಾ ನಿವಾಸಿಯೂ ಭಾರತಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ. ಹೊಸ ವ್ಯಕ್ತಿಗಳಿಗೆ ಪೌರತ್ವ ನೀಡುವ ಪ್ರಶ್ನೆಯೇ ಇರುವುದಿಲ್ಲ. ಈ ಮಸೂದೆಯಿಂದ ಈ ಮೊದಲೇ ಇಲ್ಲಿ ನೆಲೆಸಿರುವ ಜನರಿಗೆ ಪೌರತ್ವ ನೀಡಲಾಗುತ್ತದೆ. ಈ ಮೊದಲೇ ಇಲ್ಲಿಗಾಗಮಿಸುವವರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು ಹಾಗೂ ಜಿಲ್ಲಾಧಿಕಾರಿಗಳು ಈ ಅರ್ಜಿಗಳನ್ನು ಪರಿಶೀಲಿಸುತ್ತಾರೆ' ಎಂದಿದ್ದಾರೆ.