ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್ ಕುರಿತು ಎಸಿಬಿ ದಾಖಲಿಸಿರುವ ಎಫ್ಐಆರ್ ರಾಜಕೀಯ ತಿರುವು ಪಡೆದುಕೊಂಡಿದೆ.  ರಾಜ್ಯ ಸರ್ಕಾರ ಎಸಿಬಿಯನ್ನು ದುರ್ಬಳಕೆ ಮಾಡಿಕೊಂಡಿದೆ ಅಂತ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ. 

ಬೆಂಗಳೂರು(ಆ.21): ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಜಿದ್ದಿಗೆ ಬಿದ್ದಂತೆ ಆರೋಪ - ಪ್ರತ್ಯಾರೋಪದಲ್ಲಿ ತೊಡಗಿವೆ. ಬಿಎಸ್ ವೈ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಕೆಎಎಸ್​ ಅಧಿಕಾರಿ ಬಸವರಾಜೇಂದ್ರ ನೀಡಿರುವ ದೂರು ಆಧರಿಸಿ ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಸಿದ್ದರಾಮಯ್ಯ ಸರ್ಕಾರದ ಜೊತೆ ನೇರ ಕುಸ್ತಿಗೆ ಇಳಿದಿದೆ. ನಿನ್ನೆ ಕೂಡ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದು ಇಂದೂ ಕೂಡ ಪ್ರತಿಭಟನೆ ಮುಂದುವರೆಯಲಿದೆ.

ಬಿಜೆಪಿ ರಾಜಭವನ್ ಚಲೋ

ಯಡಿಯೂರಪ್ಪ ಬೆನ್ನಿಗೆ ನಿಂತಿರುವ ಬಿಜೆಪಿ, ಗಣಿ ಇಲಾಖೆ ಉಪ ಕಾರ್ಯದರ್ಶಿ ಬಸವರಾಜೇಂದ್ರ ನೀಡಿರುವ ದೂರನ್ನೇ ಆಧರಿಸಿ ರಾಜ್ಯಪಾಲರ ಬಳಿ ಹೊರಡಲು ನಿರ್ಧರಿಸಿದೆ. ಇಂದು ಬೆಳಗ್ಗೆ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್​ ಶೆಟ್ಟರ್​ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ಆಗ್ರಹಿಸಲಿದೆ.

ಈ ಮಧ್ಯೆ ಪ್ರಕರಣ ಸಂಬಂಧ ಎರಡು ದಿನಗಳಿಂದ ಯಡಿಯೂರಪ್ಪ ಮೌನ ಕಾಯ್ದುಕೊಂಡಿದ್ದಾರೆ. ಆದ್ರೆ ಅವರ ಬೆಂಬಲಿಗರಿಂದ ಮಾತ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಳು, ಟೀಕೆಗಳು ಮುಂದುವರಿಯುತ್ತಿವೆ. ಬಸವರಾಜೇಂದ್ರ ನೀಡಿರುವ ದೂರು ರಾಜ್ಯ ಸರ್ಕಾರದ ವಿರುದ್ಧದ ಹೋರಾಟಕ್ಕೆ ಬಿಜೆಪಿಗೆ ಬಲ ತುಂಬಿದ್ದು, ಸಾಧ್ಯವಾದಷ್ಟೂ ಲಾಭ ಪಡೆಯುವ ಉಮೇದಿನಲ್ಲಿ ಕಮಲ ಪಕ್ಷ ಇದೆ.

ವರದಿ: ಕಿರಣ್​ ಹನಿಯಡ್ಕ, ಸುವರ್ಣ ನ್ಯೂಸ್​.