ಸ್ವಾತಂತ್ರ್ಯ ಪೂರ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು ರವಿಕೆಗಳನ್ನು ತೊಡುತ್ತಿರಲಿಲ್ಲ. ಅವರಿಗೆ ರವಿಕೆ ತೊಡುವುದನ್ನು ಹೇಳಿ ಕೊಟ್ಟದ್ದೇ ಟಿಪ್ಪು ಸುಲ್ತಾನ್ ಎಂದು ಶಾಸಕರು ಹೇಳಿದ್ದಾರೆ. ಈ ಹೇಳಿಕೆಯಿಂದ ಇಡೀ ಪರಿಶಿಷ್ಟ ಜಾತಿ ಹೆಣ್ಣುಮಕ್ಕಳಿಗೆ ಅವಮಾನ ಮತ್ತು ಅಗೌರವ ಮಾಡಿದಂತಾಗಿದೆ.

ಶಿವಮೊಗ್ಗ(ನ.12): ನಗರದಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರ ಗೌರವಕ್ಕೆ ಮಾನಹಾನಿ ಮಾಡಿ, ದಕ್ಕೆ ತಂದಿದ್ದು, ಎಸ್‌'ಸಿ, ಎಸ್‌'ಟಿ ದೌರ್ಜನ್ಯ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾದಿಂದ ಜಿಲ್ಲಾ ವರಿಷ್ಠಾಧಿಕಾರಿ ಅಭಿನವ ಖರೆ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರ ಘನತೆಗೆ ಮತ್ತು ಗೌರವಕ್ಕೆ ಚ್ಯುತಿ ತರುವಂತೆ ಮತ್ತು ಅವರ ಮಾನಹಾನಿ ಆಗುವಂತೆ ಮಾತನಾಡಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.

ವ್ಯಕ್ತಿತ್ವ ತೇಜೋವಧೆ:

ಸ್ವಾತಂತ್ರ್ಯ ಪೂರ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು ರವಿಕೆಗಳನ್ನು ತೊಡುತ್ತಿರಲಿಲ್ಲ. ಅವರಿಗೆ ರವಿಕೆ ತೊಡುವುದನ್ನು ಹೇಳಿ ಕೊಟ್ಟದ್ದೇ ಟಿಪ್ಪು ಸುಲ್ತಾನ್ ಎಂದು ಶಾಸಕರು ಹೇಳಿದ್ದಾರೆ. ಈ ಹೇಳಿಕೆಯಿಂದ ಇಡೀ ಪರಿಶಿಷ್ಟ ಜಾತಿ ಹೆಣ್ಣುಮಕ್ಕಳಿಗೆ ಅವಮಾನ ಮತ್ತು ಅಗೌರವ ಮಾಡಿದಂತಾಗಿದೆ. ಅವರ ಘನತೆಗೆ ಮತ್ತು ವ್ಯಕ್ತಿತ್ವಕ್ಕೆ ತೇಜೋವಧೆ ಮಾಡಿದ್ದಾರೆ. ಈ ಮೂಲಕ ಇಡೀ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳಿಗೆ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರ ಮೇಲೆ ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಅವರನ್ನು ತಕ್ಷಣವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ಎಸ್.ಎನ್. ಚನ್ನಬಸಪ್ಪ, ಕೆ.ಈ. ಕಾಂತೇಶ್, ನಾಗರಾಜ್, ಎಸ್. ಜ್ಞಾನೇಶ್ವರ್, ರಮೇಶ್, ಭವಾನಿ, ಹಿರಣ್ಣಯ್ಯ, ವಿಶ್ವಾಸ್, ಕೃಷ್ಣಪ ಸೇರಿದಂತೆ ಮತ್ತಿತರರು ಹಾಜರಿದ್ದರು.