ಬಿಜೆಪಿ ಪರಿವರ್ತನಾ ಯಾತ್ರೆಗಳಿಗೆ ಜ.15 ಡೆಡ್‌ಲೈನ್ | ನ.2 ರಿಂದ ನವಕರ್ನಾಟಕ ಯಾತ್ರೆ ಆರಂಭ | ಪಕ್ಷದ ಪ್ರಮುಖರೊಂದಿಗೆ ಬಿಎಸ್‌ವೈ ಸಭೆ

ಬೆಂಗಳೂರು: ಬರುವ ನವೆಂಬರ್ 2ರಿಂದ ಆರಂಭಗೊಳ್ಳಲಿರುವ ಬಿಜೆಪಿಯ ‘ನವ ಕರ್ನಾಟಕ ಪರಿವರ್ತನಾ ಯಾತ್ರೆ’ಯ ಸಿದ್ಧತೆಗಳ ಹಿನ್ನೆಲೆಯಲ್ಲಿ ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಪ್ರಮುಖರೊಂದಿಗೆ ಸುದೀರ್ಘ ಸಭೆ ನಡೆಸಿದರು.

ಪಕ್ಷದ ಕಚೇರಿಯಲ್ಲಿ ಸಾಂಪ್ರದಾಯಿಕ ಪ್ರಚಾರ ಸಮಿತಿ ಮತ್ತು ಆಧುನಿಕ ಪ್ರಚಾರ ಸಮಿತಿಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ಯಾತ್ರೆಯ ಬಗ್ಗೆ ಈಗಿನಿಂದಲೇ ಅಗತ್ಯ ಪ್ರಚಾರ ನಡೆಸಬೇಕು. ಯಾತ್ರೆಯ ಮಹತ್ವ ಮತ್ತು ಅದರ ಧ್ಯೇಯೋದ್ದೇಶಗಳನ್ನು ಜನರಿಗೆ ತಲುಪಿಸಬೇಕು ಎಂದು ಕರೆ ನೀಡಿದರು.

ಬರುವ ಫೆಬ್ರವರಿಯಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ. ಆ ವೇಳೆ ದೊಡ್ಡ ಕಾರ್ಯಕ್ರಮ ನಡೆಸಲು ಚುನಾವಣಾ ಆಯೋಗ ಅವಕಾಶ ಕೊಡಲಿಕ್ಕಿಲ್ಲ. ಹೀಗಾಗಿ ಜನವರಿ 15ರೊಳಗೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ಯಾತ್ರೆ ಮುಗಿಸಬೇಕು. ಯಾತ್ರೆ ಮುಗಿದ ಮೇಲೆ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೆ ಎಂಬ ಸಂದೇಶ ರವಾನೆಯಾಗಬೇಕು ಎಂದು ಹೇಳಿದರು. ಈ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಉದ್ದೇಶವಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು. ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆ ಬಳಿಕ ಬಿಜೆಪಿಯ ಎಲ್ಲ ರಾಷ್ಟ್ರೀಯ ನಾಯಕರೂ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಅವರು ಮೆಚ್ಚುವ ರೀತಿಯಲ್ಲಿ ನಾವೂ ಸಿದ್ಧರಾಗಬೇಕು ಎಂದರು.