Asianet Suvarna News Asianet Suvarna News

ಇಂದಿನಿಂದ ಪರಿವರ್ತನಾ ಯಾತ್ರೆ; 75 ದಿನ, 7500 ಕಿಮೀ ಬಿಜೆಪಿ ರ್ಯಾಲಿ ಎಲ್ಲೆಲ್ಲಿ ಸಂಚಾರ?

* ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಸತತ ಪ್ರವಾಸ
* 75 ದಿನ, 7,500 ಕಿ.ಮೀ. ಸುತ್ತಾಟ; ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದ ರ್ಯಾಲಿ ಉದ್ಘಾಟನೆ
* ನಿತ್ಯ 3-4 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ಸಂಚಾರ
* ಸಿದ್ದರಾಮಯ್ಯ ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜ.25ಕ್ಕೆ ಅಂತ್ಯ
* ಬೆಂಗಳೂರಿನಲ್ಲಿ ಜ.28ರಂದು ಸಮಾರೋಪ: ಪ್ರಧಾನಿ ಮೋದಿ ಆಗಮನ

bjp parivarthana yatra

ಬೆಂಗಳೂರು(ನ. 02): ಇಂದಿನಿಂದ ರಾಜ್ಯದಲ್ಲಿ ಕೇಸರಿ ಬ್ರಿಗೇಡ್‌'ನ ಅಬ್ಬರ... ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ‘ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ’ ಆರಂಭವಾಗಿದೆ. ರಾಜ್ಯ ರಾಜಕಾರಣದ ಮಟ್ಟಿಗೆ ಇದೊಂದು ಐತಿಹಾಸಿಕ ಯಾತ್ರೆಯಾಗಲಿದ್ದು, ದಾಖಲೆ ಮೆರೆಯಲಿದೆ. ಸುಮಾರು 75 ದಿನಗಳ ಕಾಲ ಯಡಿಯೂರಪ್ಪ ಅವರೊಂದಿಗೆ ಹಲವು ಮುಖಂಡರು ಅಂದಾಜು 7,500 ಕಿ.ಮೀ.ಗಳನ್ನು ಕ್ರಮಿಸುವ ಗುರಿ ಹೊಂದಲಾಗಿದೆ. ನಗರದ ಹೊರವಲಯದಲ್ಲಿನ ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಬೃಹತ್ ಉದ್ಘಾಟನಾ ಸಮಾವೇಶ ಹಮ್ಮಿಳ್ಳಲಾಗಿದೆ. ಬಿಐಇಸಿ ಮೈದಾನದಲ್ಲಿ 13 ಎಕರೆ ಜಾಗವನ್ನು ಬಿಜೆಪಿ ಕಾರ್ಯಕರ್ತರ ಬೈಕ್'ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಅವರೊಂದಿಗೆ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ-ಸಹ ಉಸ್ತುವಾರಿಗಳೂ ಆಗಿರುವ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಮತ್ತು ಪಿಯೂಷ್ ಗೋಯಲ್ ಸೇರಿ ರಾಜ್ಯದ ಎಲ್ಲ ಹಿರಿಯ ನಾಯಕರೂ ಉಪಸ್ಥಿತರಿರಲಿದ್ದಾರೆ. ಮುಂಬರುವ 2018ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಯಾಚನೆ ಮಾಡುವುದೇ ಈ ಯಾತ್ರೆಯ ಮುಖ್ಯ ಉದ್ದೇಶವಾಗಿದ್ದು, ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳನ್ನೂ ಒಳಗೊಳ್ಳಲಾಗುತ್ತದೆ. ಯಡಿಯೂರಪ್ಪ ಅವರು ಮೊದಲ ದಿನದಿಂದ ಕೊನೆಯ ದಿನದವರೆಗೂ ಪ್ರವಾಸ ನಡೆಸಲು ತೀರ್ಮಾನಿಸಿದ್ದು, ಇತರ ಪ್ರಮುಖ ನಾಯಕರು ಆಯಾ ಭಾಗಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಯಾತ್ರೆಯ ಸಂಚಾಲಕಿಯಾಗಿ ನೇಮಕಗೊಂಡಿರುವ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಯಾತ್ರೆಯ ಉದ್ಘಾಟನಾ ಸಮಾರಂಭದ ನಂತರ ಅಲ್ಲಿಯೇ ಮಧ್ಯಾಹ್ನ ಭೋಜನ ನಡೆಯಲಿದೆ. ನಂತರ ಯಾತ್ರೆ ಆರಂಭವಾಗಲಿದ್ದು, ಮೊದಲ ದಿನ ತುಮಕೂರು ಜಿಲ್ಲೆಯ ಕುಣಿಗಲ್ ಮೂಲಕ ಸಂಚರಿಸಿ ಯಡಿಯೂರಿನಲ್ಲಿ ವಾಸ್ತವ್ಯ ಹೂಡಲಿದೆ. ಪ್ರತಿ ನಿತ್ಯ ಮೂರರಿಂದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಹಾದು ಹೋಗಲಿರುವ ಯಾತ್ರೆಗೆ ಹೆಚ್ಚೂ ಕಡಮೆ ವಾರಕ್ಕೆ ಒಂದರಂತೆ ವಿಶ್ರಾಂತಿ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ನ.2ರಂದು ಆರಂಭಗೊಳ್ಳುವ ಯಾತ್ರೆಯು ಜ.25ರಂದು ಮೈಸೂರು ಜಿಲ್ಲೆಯಲ್ಲಿ ಅಂತ್ಯಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಬಾರಿ ಸ್ಪರ್ಧಿಸಲು ನಿರ್ಧಸಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯ ಈ ಪರಿವರ್ತನಾ ಯಾತ್ರೆಯ ಕೊನೆಯ ಸಮಾರಂಭ ನಡೆಯಲಿದೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಲು ತೀರ್ಮಾನಿಸಲಾಗಿದೆ. ಕೊನೆಯ ದಿನವಾದ ಜ.25ರಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಮಾರೋಪ ಅಂಗವಾಗಿ ಬೃಹತ್ ಸಮಾವೇಶ ಆಯೋಜಿಸಲಾಗುತ್ತದೆ. ಮೂರು ದಿನಗಳ ನಂತರ ಅಂದರೆ, ಜ.28ರಂದು ಬೆಂಗಳೂರಿನಲ್ಲೂ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಪೈಕಿ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಮೂಲಕ ವಿಧಾನಸಭಾ ಚುನಾವಣೆಯ ರಣಕಹಳೆ ಮೊಳಗಿಸಲಿದ್ದಾರೆ.

ಯಾತ್ರೆ ಸಂಚರಿಸುವ ಮಾರ್ಗ:
ಬೆಂಗಳೂರು, ತುಮಕೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಪರಿವರ್ತನಾ ಯಾತ್ರೆ ಸಂಚರಿಸಲಿದೆ.

ಬೃಹತ್ ಬೈಕ್ ರ್ಯಾಲಿ:
ಯಾತ್ರೆಯ ಅಂಗವಾಗಿ ಎರಡು ಹಂತದಲ್ಲಿ ಬೈಕ್ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ. ಮೊದಲ ಹಂತದ ಯಾತ್ರೆಗೆ ದಕ್ಷಿಣ ಕರ್ನಾಟಕದ 14 ಜಿಲ್ಲೆಗಳ ಕಾರ್ಯಕರ್ತರು ಬೈಕ್‌'ಗಳ ಮೂಲಕ ಪಾಲ್ಗೊಳ್ಳಲಿದ್ದಾರೆ. ನಂತರ ಡಿಸೆಂಬರ್ 12ರಂದು ಹುಬ್ಬಳ್ಳಿಯಲ್ಲಿ ಬೈಕ್ ರ್ಯಾಲಿ ಮತ್ತು ಸಮಾವೇಶ ನಡೆಯಲಿದ್ದು, 80 ಸಾವಿರ ಬೈಕ್‌'ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಕೊಡಗು ಪ್ರವೇಶ ಇಲ್ಲ:
ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಬಿಜೆಪಿಯ ಯಾತ್ರೆ ಕೊಡಗು ಪ್ರವೇಶಿಸಲು ಪೊಲೀಸರು ಅನುಮತಿ ನೀಡಿಲ್ಲ. ಹೀಗಾಗಿ, ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದೆಡೆ ಯಾತ್ರೆ ಸಂಚರಿಸಲಿದೆ. ಕನಿಷ್ಠ ಪಕ್ಷ ಕೊಡಗು ಜಿಲ್ಲೆಯ ಗಡಿ ಭಾಗದ ಯಾವುದಾದರೊಂದು ಸ್ಥಳದಲ್ಲಿ ಪ್ರವೇಶಕ್ಕೆ ಅವಕಾಶ ಕೊಡುವಂತೆ ಬಿಜೆಪಿ ನಾಯಕರು ಮಾಡಿದ ಮನವಿಯನ್ನು ಇದುವರೆಗೆ ಪುರಸ್ಕರಿಸಲಾಗಿಲ್ಲ

ಕನ್ನಡಪ್ರಭ ವಾರ್ತೆ
epaperkannadaprabha.com

Follow Us:
Download App:
  • android
  • ios