ಬಿಜೆಪಿ ಕೋಟಿ ಕೋಟಿ ಆಮಿಷ ಒಡ್ಡುವ ಮೂಲಕ ಆಪರೇಷನ್ ಕಮಲಕ್ಕೆ ಕೈ ಹಾಕಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪ, ದೂರು ಸಲ್ಲಿಕೆ ಮಾಡುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನ ಶಾಸಕರೊಬ್ಬರು ಬಹಿರಂಗವಾಗಿ ಅದನ್ನು ಒಪ್ಪಿಕೊಂಡಿದ್ದಾರೆ. 

ಬೆಂಗಳೂರು : ಒಂದೆಡೆ, ತಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಕೋಟ್ಯಂತರ ರು. ಆಮಿಷವೊಡ್ಡಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪ, ದೂರು ಸಲ್ಲಿಕೆ ಮಾಡುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನ ಶಾಸಕರೊಬ್ಬರು ಬಹಿರಂಗವಾಗಿ ಅದನ್ನು ಒಪ್ಪಿಕೊಂಡಿದ್ದಾರೆ. ತಮ್ಮನ್ನು ಬಿಜೆಪಿಯವರು ಸಂಪರ್ಕಿಸಿದ್ದರು ಎಂದು ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ. ಎಸ್.ಶಿವಳ್ಳಿ ಶುಕ್ರವಾರ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿರುವುದು ನಿಜ. ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದರು ಎಂದು ಹೇಳಿದರು. ಬಿಜೆಯವರ ಆಮಿಷವನ್ನು ನಾನು ಸ್ಪಷ್ಟವಾಗಿ ತಳ್ಳಿಹಾಕಿದ್ದೇನೆ. ನಾನು ಕಟ್ಟಾ ಕಾಂಗ್ರೆಸಿಗ. ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದ ಶಾಸಕ ಶಿವಳ್ಳಿ, ಆದರೆಏನೇನು ಆಮಿಷವೊಡ್ಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು.

 ನನ್ನನ್ನು ಜನತೆ ಕಾಂಗ್ರೆಸ್‌ನಿಂದ ಆಯ್ಕೆ ಮಾಡಿದ್ದಾರೆ ನಾನು ಕಾಂಗ್ರೆಸ್ ಬಿಡುವುದಿಲ್ಲ. ನಾನಷ್ಟೇ ಅಲ್ಲ, ನಮ್ಮ ಪಕ್ಷದ ಯಾವ ಶಾಸಕರೂ ಪಕ್ಷ ಬಿಡಲ್ಲ ಎಂದು ಹೇಳಿದರು. ಮಾಜಿ ಸಚಿವ ಬಿ.ಸಿ. ಪಾಟೀಲ್, ಲಿಂಗಸ್ಗೂರಿನ ಶಾಸಕ ಡಿ.ಎಸ್. ಹುಲಗೇರಿ ಅವರನ್ನುಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಸುದ್ದಿ ಇದ್ದರೂ ಈಇಬ್ಬರೂ ಅಂಥ ಯಾವುದೇ ಪ್ರಯತ್ನ ನಡೆದಿಲ್ಲ ಎಂದಿದ್ದಾರೆ.