ಪಿರಿಯಾಪಟ್ಟಣ [ಜು03]:  ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಮುಂದುವರಿಸಲು ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ನನ್ನ ಎದುರೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಬಳಿ 80 ಕೋಟಿ ರು. ಕೇಳಿದ್ದರು ಎಂದು ಪಿರಿಯಾಪಟ್ಟಣದ ಜೆಡಿಎಸ್‌ ಶಾಸಕ ಕೆ.ಮಹದೇವ ಹೊಸ ಬಾಂಬ್‌ ಸಿಡಿಸಿದ್ದಾರೆ. ಇದೇ ವೇಳೆ ಬಿಜೆಪಿಯಿಂದ ನನಗೆ 30 ಕೋಟಿ ಆಮಿಷ ಬಂದಿತ್ತು ಎಂದು ಆರೋಪಿಸಿದ್ದಾರೆ.

ಬುಧವಾರ ತಾಲೂಕಿನ ಮುತ್ತಿನ ಮುಳುಸೋಗೆ ಬಳಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ವೀಕ್ಷಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹದೇವ ಈ ವಿಚಾರವನ್ನು ಬಹಿರಂಗಪಡಿಸಿದರು.

ಮಹದೇವ ಹೇಳಿದ್ದಿಷ್ಟು: ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳು ಎಲ್ಲರನ್ನೂ ಸಮತೋಲನದಲ್ಲಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಇಲ್ಲವಾದಲ್ಲಿ ನಾವೀಗ ನೋಡುತ್ತಿದ್ದೇವಲ್ಲ. ರಾಜೀನಾಮೆ ಕೊಡುತ್ತೇವೆ ಅಂತ ಹೆದರಿಸುವುದು, ಬೆದರಿಸುವುದು, ದುಡ್ಡು ಕೊಡಿ ಅನ್ನುವುದು, ದುಡ್ಡು ಕೊಡದೇ ಹೋದರೆ ರಾಜೀನಾಮೆ ನೀಡ್ತೀನಿ ಅನ್ನುವುದೆಲ್ಲ ನಡೀತಿರುತ್ತವೆ 80 ಕೋಟಿ ರು. ತಂದು ಮಡುಗಿದರೆ ನಿಮ್ಮ ಜೊತೆಗೇ ಇರುವುದಾಗಿ ರಮೇಶ್‌ ಜಾರಕಿಹೊಳಿ ನನ್ನೆದುರಿಗೇ ಮುಖ್ಯಮಂತ್ರಿ ಬಳಿ ಬೇಡಿಕೆಯಿಟ್ಟಿದ್ದರು. 

ನನಗೂ ಬಿಜೆಪಿ ಕಡೆಯಿಂದ ಆಫರ್‌ ಬಂದಿತ್ತು. 30ರಿಂದ 40 ಕೋಟಿ ರು. ಹಣವನ್ನು ನನ್ನ ರೂಂನಲ್ಲೇ ತಂದು ಇಟ್ಟಿದ್ದರು. ಹಣ ತೆಗೆದುಕೊಂಡು ಹೋಗುತ್ತಿರೋ ಇಲ್ಲಾ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಪೊಲೀಸರನ್ನು ಕರೆಸಲೋ ಎಂದು ಕೇಳಿದೊಡನೆ ತೆಗೆದುಕೊಂಡು ಹೋದರು. ಹೀಗೆ 3 ಸಾರಿ ಹಣ ತಂದಿದ್ದರು. ನಾವು ಸತ್ತಾಗ ಮಣ್ಣು ಹಾಕಿಕೊಂಡು ಹೋಗುವುದು, ಹಣ ಹಾಕಿಕೊಂಡು ಹೋಗುವುದಲ್ಲ. ಅದಕ್ಕೆ ಹಣಕ್ಕೆ ನಮ್ಮನ್ನು ಮಾರಾಟ ಮಾಡಿಕೊಳ್ಳಬಾರದು. ಇಲ್ಲವಾದಲ್ಲಿ ನಾನೂ 40 ಕೋಟಿ ತಗೊಂಡು ಪಿರಿಯಾಪಟ್ಟಣವೂ ಬೇಡ, ರಾಜಕಾರಣವೂ ಬೇಡ ಎಂದು ಎಲ್ಲಾದರೂ ಹೋಗಿ ನೆಮ್ಮದಿಯಾಗಿರಬಹುದಿತ್ತು ಎಂದು ಹೇಳಿದರು.