ಬೆಂಗಳೂರು (ಜೂ.19) :  ಪಕ್ಷೇತರರಿಬ್ಬರಿಗೆ ಸಚಿವ ಸ್ಥಾನ ನೀಡಿದರೂ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಮತ್ತೆ ಅಭದ್ರತೆ ಕಾಡುತ್ತಿರುವಂತಿದೆ. ಬಿಜೆಪಿ ಮತ್ತೆ  ‘ಆಪರೇಷನ್ ಕಮಲ’ಕ್ಕೆ ಕೈಹಾಕಿದ್ದು, ಜೆಡಿಎಸ್ ಶಾಸಕರೊಬ್ಬರಿಗೆ ಬಿಜೆಪಿ ಮುಖಂಡರೊಬ್ಬರಿಂದ 10 ಕೋಟಿ ರು. ಆಮಿಷವೊಡ್ಡಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಆರೋಪಿಸಿದ್ದಾರೆ. ಆದರೆ, ಹಣದ ಆಮಿಷದ ಮೂಲಕ ರಾಜ್ಯ ಸಮ್ಮಿಶ್ರ ಸರ್ಕಾರ ಕೆಡಹುವ ಬಿಜೆಪಿ ಪ್ರಯತ್ನಕ್ಕೆ ಯಾವುದೇ ಕಾರಣಕ್ಕೂ ಯಶಸ್ಸು ಸಿಗಲ್ಲ ಎಂದು ಮುಖ್ಯಮಂತ್ರಿ ಗುಡುಗಿದ್ದಾರೆ.

ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದ ಸರ್ಕಾರಿ ಶಾಲೆ ಮೈದಾನದಲ್ಲಿ ಮಂಗಳವಾರ ಜನತಾ ದರ್ಶನ ಹಾಗೂ ರೈತರಿಗೆ ಋಣಮುಕ್ತ ಪತ್ರ ವಿತರಿಸಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ಬಿಜೆಪಿ ಮುಖಂಡರೊಬ್ಬರು ರಾತ್ರಿ 11 ಗಂಟೆ ಸುಮಾರಿಗೆ  ನಮ್ಮ ಶಾಸಕರೊಬ್ಬರಿಗೆ ಕರೆ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್ -ಜೆಡಿಎಸ್‌ನಿಂದ 10 ಮಂದಿ ಶಾಸಕರು ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ. ನೀವೂ ಬರೋದಾದ್ರೆ ಹೇಳಿ 10 ಕೋಟಿ ಕೊಡಿಸುತ್ತೇನೆ ಎಂದು ಆಮಿಷವೊಡ್ಡಿದ್ದಾರೆ. ಜತೆಗೆ, ಹೇಳಿದ ಸ್ಥಳಕ್ಕೆ ಆ ಹಣ ತಲುಪಿಸುವುದಾಗಿಯೂ ತಿಳಿಸಿದ್ದಾರೆ. ಈ ವಿಚಾರವನ್ನು ಸ್ವತಃ ನಮ್ಮ ಶಾಸಕನೇ ರಾತ್ರಿ ಕರೆ ಮಾಡಿ ನನ್ನ ಗಮನಕ್ಕೆ ತಂದಿದ್ದಾರೆ’ಎಂದು ಕುಮಾರಸ್ವಾಮಿ ಕಿಡಿಕಾರಿದರು. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು, ರಾಜ್ಯ ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿ ನಾಯಕರು ಹಣದ ಚೀಲ ಹಿಡಿದುಕೊಂಡು ಕುಳಿತಿದ್ದಾರೆ ಎಂದು ಕಿಡಿಕಾರಿದ ಕುಮಾರಸ್ವಾಮಿ, ಈ ಸರ್ಕಾರ ಯಾವುದೇ ಕಾರಣಕ್ಕೂ ಪತನ ಆಗಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

ಆತಂಕ ಬೇಡ: ಬಿಜೆಪಿ ನಾಯಕರು ಮೈತ್ರಿ ಸರ್ಕಾರ ಬೆಳಗ್ಗೆ ಬೀಳುತ್ತೆ, ಮಧ್ಯಾಹ್ನ ಹೊರಟ್ಹೋಗುತ್ತೆ, ಸಂಜೆ ಬಿದ್ದೇ ಹೋಗುತ್ತೆ ಎಂದು ಹೇಳುತ್ತಾ ತಿರುಗಾಡುತ್ತಿದ್ದಾರೆ. ಸರ್ಕಾರ ಉರುಳಿಸಲು ಒಂದಲ್ಲ ಒಂದು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ, ಈ ಹೇಳಿಕೆಗಳಿಗೆ ಯಾರೂ ಆತಂಕಪಡಬೇಕಿಲ್ಲ. ಇದನ್ನೆಲ್ಲ ಜಯಿಸಿ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ. ಜನರ ಆಶೀರ್ವಾದ ಮತ್ತು ದೈವಾನುಗ್ರಹದಿಂದ ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಈ ಸರ್ಕಾರವನ್ನು ಅಷ್ಟು ಸುಲಭವಾಗಿ ಪತನವಾಗಲು ಬಿಡುವುದಿಲ್ಲ. ನನ್ನ ಮತ್ತು ಸರ್ಕಾರದ ಮೇಲೆ ನೂರಕ್ಕೆ ನೂರರಷ್ಟು ನಂಬಿಕೆ ಇಡಿ ಎಂದು ಕುಮಾರಸ್ವಾಮಿ ಹೇಳಿದರು.