ಚಾಮರಾಜನಗರ[ಅ.05]: ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಸಹಾಯಕತೆ ತೋರುತ್ತಿದೆ ಎಂದು ಸಂಸದ ಶ್ರೀನಿವಾಸ್‌ಪ್ರಸಾದ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಬಳಿಗೆ ಮುಖ್ಯಮಂತ್ರಿಗಳು ಸರ್ವಪಕ್ಷ ನಿಯೋಗ ಕರೆದೊಯ್ಯಬೇಕಿತ್ತು. ಸಂಸದರನ್ನು ಕರೆದು ಸಭೆ ಮಾಡಬೇಕಿತ್ತು. ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಪ್ರಹ್ಲಾದ್‌ ಜೋಷಿ, ಸದಾನಂದಗೌಡ ಆಸಕ್ತಿ ವಹಿಸುತ್ತಿಲ್ಲ. ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ. ನಾಳೆ, ನಾಡಿದ್ದು ಅಂತ ದಿನಕ್ಕೊಂದು ಸಬೂಬು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ತಾಳ್ಮೆ ಪರೀಕ್ಷೆ ಮಾಡ್ತಾ ಇದ್ದೀರಾ ಎಂದು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ ಅವರು, ಈಗಾಗಲೇ ಕೇಂದ್ರದ ಮೇಲೆ ಒತ್ತಡ ತಂದು ಪರಿಹಾರ ಬಿಡುಗಡೆ ಮಾಡಿಸಬೇಕಿತ್ತು. ನೆರೆ ಪರಿಹಾರ ವಿಚಾರದಲ್ಲಿ ನಾವು ಸಂಪೂರ್ಣ ಸೋತಿದ್ದೇವೆ. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ನಿಂದ ಹಣ ಬಿಡುಗಡೆಗೊಳಿಸಬೇಕಿತ್ತು. ಪಕ್ಷದ ಶಿಸ್ತಿನ ಹೆಸರಲ್ಲಿ ಎಲ್ಲಾ ಮುಚ್ಚಿಡೋದು ಸರಿಯಲ್ಲ. ಎಲ್ಲವನ್ನೂ ನಾವೂ ಸರಿಪಡಿಸಿಕೊಳ್ಳೋಣ ಎಂಬುದು ಸರಿಯಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ 25 ಮಂದಿ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಒಂದು ಸಭೆ ಕೂಡ ಕರೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಹಾಗೂ ಕೇಂದ್ರದ ವರದಿಗಳಲ್ಲಿ ವ್ಯತ್ಯಾಸ ಏನೇ ಇರಲಿ ಮೊದಲು ಹಣ ಬಿಡುಗಡೆ ಮಾಡಲಿ. ಕೇಂದ್ರದ ಗೃಹ ಸಚಿವರು, ಹಣಕಾಸು ಸಚಿವರು ಈಗಾಗಲೇ ನೆರೆ ಪರಿಶೀಲನೆ ಮಾಡಿ ಹೋಗಿದ್ದಾರೆ. ಆದರೆ, ಏಕೆ ವಿಳಂಬ ಮಾಡುತ್ತಿದ್ದಾರೆ. ಏನು ನಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಜನರ ಹಿತದೃಷ್ಟಿಯಿಂದ ನಿರ್ದಾಕ್ಷಿಣ್ಯವಾಗಿ ಹೇಳಲೇ ಬೇಕಾಗುತ್ತೆ ಎಂದರು.

ರಾಜ್ಯ ಬೊಕ್ಕಸ ಖಾಲಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನೆರೆ ಪರಿಹಾರಕ್ಕೆ ರಾಜ್ಯದಲ್ಲಿ .38 ಸಾವಿರ ಕೋಟಿ ಎಲ್ಲಿ ಬರುತ್ತೆ. ಕೇಂದ್ರದ ನೆರವು ಬರಬೇಕು. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ನಿಂದ .30,050 ಕೋಟಿ ಬರಬೇಕು, ಒಂದು ಬಿಡಿಗಾಸು ಬಂದಿಲ್ಲ. ರಾಜ್ಯದ ಕಂದಾಯ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರಾ?, ಕೃಷಿ ಸಚಿವ ಯಾರು?, ಇವರೆಲ್ಲಾ ಹೋಗಿ ಒತ್ತಾಯ ಮಾಡಬೇಕಿತ್ತು ಎಂದರು.