ಮೈಸೂರು, (ಆ.27): ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿರುವುದಕ್ಕೆ ಬಿಜೆಪಿಯಲ್ಲೇ ಆಕ್ಷೇಪ ವ್ಯಕ್ತವಾಗುತ್ತಿವೆ.

ಈ ಬಗ್ಗೆ ಮೈಸೂರಿನಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್, ಮೂವರು ಡಿಸಿಎಂಗಳನ್ನು ಮಾಡಿರುವುದರಿಂದ ಉಪಯೋಗ ಏನಿದೆ? ಎಂದು ಪರೋಕ್ಷವಾಗಿ ತಮ್ಮ ಹೈಕಮಾಂಡ್‌ಗೆ ಪ್ರಶ್ನೆ ಹಾಕಿದರು.

ರಾಮನ ಮೇಲಿಲ್ಲದ ಪ್ರೀತಿ ಲಕ್ಷ್ಮಣನ ಮೇಲೇಕೆ? ಇದಕ್ಕಿಂತ ಬೇರೆ ಕಾರಣ ಬೇಕೆ?

ಇವತ್ತಿನ ಪರಿಸ್ಥಿತಿಯಲ್ಲಿ ಮೂವರು ಡಿಸಿಎಂ ಅವಶ್ಯಕತೆ ಇಲ್ಲ. ಹೈಕಮಾಂಡ್ ಮಾಡಿದರೆ ಅದು ಹೈಕಮಾಂಡ್ ತಪ್ಪು. ಜನರು ಎಲ್ಲವನ್ನೂ ನೋಡುತ್ತಾ ಇದ್ದಾರೆ. ಹೈಕಮಾಂಡ್‍ಗೆ ಸರಿಯಾದ ಮಾಹಿತಿ ನೀಡಬೇಕಿತ್ತು. ಹೈಕಮಾಂಡ್ ತೆಗೆದುಕೊಂಡಿರೋ ನಿರ್ಧಾರ ಸರಿಯಲ್ಲ. ಪಕ್ಷವನ್ನು ಇನ್ನೂ ಚೆನ್ನಾಗಿ ನಡೆಸಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೊದಲು ಹೊಂದಾಣಿಕೆ ಮಾಡಿಕೊಂಡು ಹೋಗಿ. ರಾಜ್ಯದ ಮುಖಂಡರು ತೀರ್ಮಾನ ಮಾಡಿಕೊಂಡು ನಿರ್ಧಾರ ಮಾಡಿ. ಈ ರೀತಿ ಕಚ್ಚಾಟದಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ. ಹೀಗಾಗಿ ಡಿಸಿಎಂ ಸ್ಥಾನ, ಖಾತೆಗಾಗಿ ಜಗಳ ಬಿಡಿ. ಅತೃಪ್ತರ ರಾಜೀನಾಮೆಯಿಂದ ನಿಮಗೆ ಅಧಿಕಾರ ಸಿಕ್ಕಿದೆ. ಇದನ್ನು ನೆನಪಿಟ್ಟುಕೊಂಡು ಒಳ್ಳೆಯ ಸರಕಾರ ಕೊಡಿ  ಎಂದು ಸಲಹೆ ನೀಡಿದರು.

ಸವದಿಗೆ ಡಿಸಿಎಂ ಸ್ಥಾನ : ಯಡಿಯೂರಪ್ಪಗೆ ಶಾಕ್‌

ಸಿದ್ದರಾಮಯ್ಯನು ಕೂಡ ಅತೃಪ್ತ ಶಾಸಕನೇ. ಸಿಎಂಗೆ ಕೆಲಸ ಮಾಡಿಕೊಡಿ ಎಂದು 20 ಪತ್ರ ಬರೆದಿದ್ದರು. ಆದರೆ ಅದರಲ್ಲಿ ಒಂದು ಕೆಲಸವೂ ಮಾಡಿಕೊಡಲಿಲ್ಲ. ಇದನ್ನ ಸ್ವತಃ ಸಿದ್ದರಾಮಯ್ಯನವರೇ ಹೇಳಿಕೊಂಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಕೂಡ ಅತೃಪ್ತ ಶಾಸಕರಾಗುತ್ತಾರೆ ಎಂದು ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದರು.