ಬೆಂಗಳೂರು, (ಆ.08): ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರೈ ಹಾಗೂ ಅವರ ಕೌಟುಂಬಿಕ ವಿಚಾರದ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಅವಹೇಳನಕಾರಿ ಬರಹ ಪೋಸ್ಟ್ ಮಾಡಿದ್ದ ಸಂಸದ ಪ್ರತಾಪ್‌  ಸಿಂಹ ಕ್ಷಮೆಯಾಚಿಸಿದ್ದಾರೆ.

ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ

ಈ ಕುರಿತಂತೆ ಟ್ವಿಟ್ಟರ್‌ನಲ್ಲಿ  ಕ್ಷಮೆಯಾಚಿಸಿರುವ ಪ್ರತಾಪ್ ಸಿಂಹ, 'ನಿಮ್ಮ ಹಾಗೂ ನಿಮ್ಮ ಕುಟುಂದದ ವಿರುದ್ಧ 2017ರ ಅಕ್ಟೋಬರ್ 2 ಮತ್ತು 3ರಂದು ನಿಂದನಾತ್ಮಕ ಬರಹನ್ನು ಪೋಸ್ಟ್ ಮಾಡಿದ್ದೆ. ಇದು ನೋವು ತರುವಂತದ್ದು ಎಂದು ತಿಳಿದಿದೆ. ಹಾಗಾಗಿ ಇದನ್ನು ವಾಪಸ್ ಪಡೆಯುತ್ತಿದ್ದು, ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ಪ್ರಕಾಶ್ ರಾಜ್ ಅವರಿಗೆ ಟ್ಯಾಗ್ ಮಾಡಿ ಕ್ಷಮೆಯಾಚಿಸಿದ್ದಾರೆ.

ಸಿಂಹ ಕ್ಷಮೆಯನ್ನು ಪ್ರಕಾಶ್ ರಾಜ್ ಕೂಡ ಟ್ವಿಟ್ಟರ್ ಮೂಲಕ ಸ್ವಾಗತಿಸಿದ್ದಾರೆ. 'ಧನ್ಯವಾದಗಳು ಪ್ರತಾಪ್ ಸಿಂಹ ಅವರೇ, ನಿಮ್ಮ ಕ್ಷಮೆಯನ್ನು ಸ್ವೀಕರಿಸಿದ್ದೇನೆ. ನಮ್ಮ ಸಿದ್ಧಾಂತಗಳಲ್ಲಿ ವೈರತ್ವಗಳಿರಬಹುದು. ಆದ್ರೆ ಸೋಶಿಯಲ್ ಮಿಡಿಯಾದಲ್ಲಿ ವೈಯಕ್ತಿ ನಿಂದನೆಗಳಿಂದ ಕೀಳು ಮಟ್ಟಕ್ಕೆ  ಇಳಿಯುವುದ ಬೇಡ. ನಮ್ಮ ವೈಯಕ್ತಿಕ ಕ್ಷೇತ್ರದಲ್ಲಿ ಯಶಸ್ವಿ ವ್ಯಕ್ತಿಗಳಾಗಿದ್ದೇವೆ ಎಂದು ಪ್ರತಾಪ್ ಸಿಂಹ ಟ್ವೀಟ್‌ಗೆ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ. 

ಪ್ರತಾಪ್ ಸಿಂಹ ಪೋಸ್ಟ್‌ನಲ್ಲೇನಿತ್ತು?
ಮಗನ ಸಾವಿನ ದು:ಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈಯಂತಹವನು ಮೋದಿ, ಯೋಗಿ ಬಗ್ಗೆ ಹೇಳುವಷ್ಟು ಯೋಗ್ಯತೆಯಿರುವವನಾ? ಎಂದು ಅಕ್ಟೋಬರ್ 2, 2017 ರಂದು ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ನಟ ಪ್ರಕಾಶ್ ಆರಂಭಿಸಿರುವ ‘ಜಸ್ಟ್ ಆಸ್ಕಿಂಗ್’ ಚಳವಳಿಯ ಭಾಗವಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಎತ್ತಿದ್ದ ಪ್ರಶ್ನೆಗಳಿಗೆ ಸಂಸದ ಪ್ರತಾಪಸಿಂಹ ತಮ್ಮ ಅಂಕಣ ಬರಹ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ರೈ ಒತ್ತಾಯಿಸಿದ್ದರು.

 ಸಂಸದ ಪ್ರತಾಪಸಿಂಹ ಕ್ಷಮೆ ಕೋರದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕಾಶ್ ರೈ ಅವರು ಮೈಸೂರು ನ್ಯಾಯಾಲಯದಲ್ಲಿ 1ರು.ರಷ್ಟು  ಮಾನನಷ್ಟ ಮೊಕದ್ದಮೆ ಹೂಡಿದ್ದರು.ಇದೀಗ ಈ ಪ್ರಕರಣ ಅಂತ್ಯಗೊಂಡಿದೆ.