ಶಬರಿಮಲೆ ಉಳಿಸಿ ಅಭಿಯಾನದಲ್ಲಿ ಪ್ರತಾಪ್ ಸಿಂಹ, ಮೋಹನ್ ಭಾಗಿ | ಶಬರಿಮಲೆ ಹೋರಾಟಕ್ಕೆ ಬಿಜೆಪಿ ಸಂಸದರು
ಬೆಂಗಳೂರು (ಅ. 12): ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ಕೇರಳದಲ್ಲಿ ‘ಶಬರಿಮಲೆ ಉಳಿಸಿ’ ಹೆಸರಿನಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ರಾಜ್ಯದ ಇಬ್ಬರು ಬಿಜೆಪಿ ಸಂಸದರು ಶುಕ್ರವಾರ ಪಾಲ್ಗೊಳ್ಳಲಿದ್ದಾರೆ.
‘ಸೇವ್ ಶಬರಿಮಲೆ’ ಹೆಸರಿನಲ್ಲಿ ಪಾಂಡಳಮ್‌ನಂದ ಶಬರಿಮಲೆವರೆಗೆ ಕೇರಳದ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಪಾದಯಾತ್ರೆ ಹಮ್ಮಿಕೊಂಡಿವೆ. ಈ ಹೋರಾಟವನ್ನು ಬೆಂಬಲಿಸಿರುವ ಸಂಸದರಾದ ಬೆಂಗಳೂರು ಕೇಂದ್ರ ಕ್ಷೇತ್ರದ ಪಿ.ಸಿ.ಮೋಹನ್ ಹಾಗೂ ಮೈಸೂರಿನ ಪ್ರತಾಪ್ ಸಿಂಹ, ಶುಕ್ರವಾರ ಅಸಂಖ್ಯಾತ ಅಯ್ಯಪ್ಪ ಭಕ್ತರ ಜತೆ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆ.
ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯದ ಸಂರಕ್ಷಣೆ ಕೂಡ ಪ್ರಜೆಗಳ ಹಕ್ಕು. ಇದು ಲಕ್ಷಾಂತರ ಭಕ್ತರ ಶ್ರದ್ಧೆಯ ಪ್ರಶ್ನೆಯಾಗಿದೆ. ಶಬರಿಮಲೆ ದೇಗುಲದ ಪ್ರಾಚೀನ ಪರಂಪರೆ ಮತ್ತು ಭಕ್ತರ ನಂಬಿಕೆಗಳ ಸಂರಕ್ಷಣೆ ಮತ್ತು ಜಾಗೃತಿಗಾಗಿ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಿದ್ದಾರೆ. ಅವರ ನಿಲುವುಗಳನ್ನು ಬೆಂಬಲಿಸಿ ತಾವೂ ಭಾಗವಹಿಸುತ್ತಿರುವುದಾಗಿ ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
