ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ವಿಧಾನಸಭೆಯಲ್ಲಿ ಸದ್ದು ಮಾಡಿದೆ. ಪ್ರಕರಣದಲ್ಲಿ  ಸರ್ಕಾರದ ಹಸ್ತಕ್ಷೇಪ ಮಾಡುತ್ತಿದೆ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.   

ಬೆಳಗಾವಿ (ನ.20): ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ವಿಧಾನಸಭೆಯಲ್ಲಿ ಸದ್ದು ಮಾಡಿದೆ. ಪ್ರಕರಣದಲ್ಲಿ ಸರ್ಕಾರದ ಹಸ್ತಕ್ಷೇಪ ಮಾಡುತ್ತಿದೆ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಅಣತಿಯಂತೆ ಪೋಸ್ಟ್ ಮಾರ್ಟಂ ಮಾಡಿದ್ದಾಗಿ ಗಣಪತಿ ಪ್ರಕರಣದಲ್ಲಿ ಪೋಸ್ಟ್ ಮಾರ್ಟಂ ಮಾಡಿದ ವೈದ್ಯೆ ಡಾ. ಶೈಲಜಾ ಅವರೇ ಸಿಬಿಐಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿದ್ದಾರೆ. ಸರ್ಕಾರ ಸರ್ಕಾರಿ ವೈದ್ಯೆ ಶೈಲಜಾ ಮೇಲೆ ಒತ್ತಡ ತಂದಿದೆ. ನಾವು ಪದೇ ಪದೇ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿದರೂ ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಕೂಡಲೇ ಜಾರ್ಜ್ ರಾಜೀನಾಮೆ ಕೊಡಲೇಬೇಕು. ಮುಖ್ಯಮಂತ್ರಿಯವರು ರಾಜೀನಾಮೆ ನೀಡಲಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ. ವಿಧಾನಸಭೆಯಲ್ಲಿ ಪ್ರತಿಪಕ್ಷ- ಆಡಳಿತ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಸದನದ ಬಾವಿಗಿಳಿದು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಕೆಲ ಮಾಧ್ಯಮದಲ್ಲಿ ಬಂದದ್ದನ್ನೇ ಹೇಳಿದ್ರೆ ಹೇಗೆ ? ನಿಮ್ಮ ಬಳಿ ಡಾಕ್ಟರ್ ಹೇಳಿಕೆ ಬಗ್ಗೆ ಸಾಕ್ಷಿ ಇದೆಯಾ ತೋರಿಸಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ. ರಾಮಲಿಂಗಾರೆಡ್ಡಿ ಹೇಳಿಕೆ ಬಿಜೆಪಿ ಸದಸ್ಯ ಸುನೀಲ್​ ಕುಮಾರ್ ಕಿಡಿಕಾರಿದ್ದಾರೆ. ‘ಗೃಹ ಸಚಿವರು ಮಾಧ್ಯಮಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಜಾರ್ಜ್ ವಿಚಾರದಲ್ಲಿ ಸರ್ಕಾರ ಮೃಧು ಧೋರಣೆ ಅನುಸರಿಸುತ್ತಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ.