ಆಗ್ರಾದಲ್ಲಿನ  ವಿಶ್ವ ಪ್ರಸಿದ್ಧ  ಐತಿಹಾಸಿಕ  ಮೊಗಲ್‌  ಸ್ಮಾರಕ  ತಾಜ್‌ ಮಹಲ್‌ಗೆ  "ತಾಜ್‌ ಮಂದಿರ್‌'' ಎಂದು ಪುನರ್‌  ನಾಮಕರಣ  ಮಾಡುವಂತೆ  ಬಿಜೆಪಿ  ನಾಯಕ  ವಿನಯ್‌  ಕಟಿಯಾರ್‌ ಸರಕಾರವನ್ನು ಆಗ್ರಹಿಸಿದ್ದಾರೆ.

ನವದೆಹಲಿ (ಅ.25): ಆಗ್ರಾದಲ್ಲಿನ  ವಿಶ್ವ ಪ್ರಸಿದ್ಧ  ಐತಿಹಾಸಿಕ  ಮೊಗಲ್‌  ಸ್ಮಾರಕ  ತಾಜ್‌ ಮಹಲ್‌ಗೆ  "ತಾಜ್‌ ಮಂದಿರ್‌'' ಎಂದು ಪುನರ್‌  ನಾಮಕರಣ  ಮಾಡುವಂತೆ  ಬಿಜೆಪಿ  ನಾಯಕ  ವಿನಯ್‌  ಕಟಿಯಾರ್‌ ಸರಕಾರವನ್ನು ಆಗ್ರಹಿಸಿದ್ದಾರೆ.

 ತಾಜ್‌ ಮಹಲ್‌ಗೆ ತಾಜ್‌ ಮಂದಿರ್‌ ಎಂದು ಪುನರ್‌ ನಾಮಕರಣ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ; ಏಕೆಂದರೆ ತಾಜ್‌ ಮಹಲ್‌ ಹಿಂದೆ ಶಿವಾಲಯವಾಗಿತ್ತು' ಎಂದು ಕಟಿಯಾರ್‌ ಹೇಳಿದ್ದಾರೆ.  ತಾಜ್‌ ಮಹಲ್‌  ಆವರಣದಲ್ಲಿ  ನಿನ್ನೆ  ಸೋಮವಾರ ಹಿಂದೂ ಯುವ ವಾಹಿನಿ ಸಂಘಟನೆಗೆ ಸೇರಿದ ಕಾರ್ಯಕರ್ತರ ಒಂದು ಸಮೂಹ ಶಿವ  ಚಾಳೀಸಾ ಪಠಿಸಿ ಪೊಲೀಸರಿಂದ ಬಂಧನಕ್ಕೆ ಗುರಿಯಾಗಿತ್ತು.  ಈ ಹಿನ್ನೆಲೆಯಲ್ಲಿ  ವಿನಯ್‌  ಕಟಿಯಾರ್‌ ಅವರು ತಾಜ್‌ ಮಹಲ್‌ ಪುನರ್‌ ನಾಮಕರಣಕ್ಕೆ ಒತ್ತಾಯಿಸಿದ್ದಾರೆ.

ವಾರದ ಹಿಂದೆ ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ಅವರು, "ಐತಿಹಾಸಿಕ ಸ್ಮಾರಕ ತಾಜ್‌ ಮಹಲ್‌ ದ್ರೋಹಿಗಳ ನಿರ್ಮಿತಿ; ಅದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿನ ಒಂದು ಕಪ್ಪು ಚುಕ್ಕೆ' ಎಂದು ಹೇಳಿದ್ದರು. ಆ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, "ಐತಿಹಾಸಿಕ ತಾಜ್‌ ಮಹಲ್‌ ಕಟ್ಟಡವನ್ನು ಯಾರು, ಯಾಕಾಗಿ ಕಟ್ಟಿದರು ಎಂಬುದು ಮುಖ್ಯವಲ್ಲ; ಅದು ಭಾರತೀಯ ಕಾರ್ಮಿಕರ ರಕ್ತ ಮತ್ತು ಬೆವರಿನ ಫ‌ಲವಾಗಿದೆ' ಎಂದು ಹೇಳಿದ್ದರು. ಇಷ್ಟಕ್ಕೂ ತಾಜ್‌ ಮಹಲ್‌ ಕುರಿತ ವಿವಾದ ಆರಂಭವಾದದ್ದು ಉತ್ತರ ಪ್ರದೇಶ ಸರಕಾರದ ಪ್ರವಾಸೋದ್ಯಮ ಇಲಾಖೆ  ತನ್ನ ಕೈಪಿಡಿಯಲ್ಲಿ  ಐತಿಹಾಸಿಕ ಸ್ಮಾರಕ ತಾಜ್‌ ಮಹಲ್‌ ಅನ್ನು ಉಲ್ಲೇಖೀಸದೆ ಕೈಬಿಟ್ಟ ಕಾರಣಕ್ಕೆ !