ಬೆಂಗಳೂರು [ಜೂ.28] :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಲೋಕಸಭಾ ಚುನಾವಣೆಯ ಸೋಲಿನ ಹತಾಶೆಯ ಭಾವನೆ ಕಾಡುತ್ತಿದೆ. ಹೀಗಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಜನರು ಹಾಗೂ ನಮ್ಮ ಶಾಸಕರ ಮೇಲೆ ಮುಖ್ಯಮಂತ್ರಿಗಳಿಗೆ ಬೆದರಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ರೈತ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದೀಗ ಅಹವಾಲು ಹೇಳಿಕೊಳ್ಳಲು ಬಂದವರ ಮೇಲೆ ಲಾಠಿ ಚಾಜ್‌ರ್‍ ಮಾಡುತ್ತೇನೆ ಎಂದು ಹೆದರಿಸಿದ್ದಾರೆ. ಇಂತಹ ತುಘಲಕ್‌ ದರ್ಬಾರ್‌ ನಡೆಯುವುದಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಶಾಸಕರಿಗೂ ಮುಖ್ಯಮಂತ್ರಿಗಳು ಅವಾಚ್ಯ ಶಬ್ದಗಳಿಂದ ಟೀಕೆ ಮಾಡಿದ್ದಾರೆ. ನಿಮ್ಮ ಸಚಿವ ಸಂಪುಟದಲ್ಲಿರುವ ಸಚಿವರು ಗೂಂಡಾಗಳೇ ಹೊರತು ನಮ್ಮ ಶಾಸಕರು ಗೂಂಡಾಗಳಲ್ಲ. ತಮ್ಮ ಹೇಳಿಕೆಗೆ ಮುಖ್ಯಮಂತ್ರಿಗಳು ಕೂಡಲೇ ನಮ್ಮ ಶಾಸಕರ ಕ್ಷಮೆ ಕೇಳಬೇಕು. 37 ಸ್ಥಾನ ಇಟ್ಟುಕೊಂಡು ಮುಖ್ಯಮಂತ್ರಿಗಳಾದ ನಿಮಗೇ ಇಷ್ಟುಇರಬೇಕಾದರೆ ನಾವು 105 ಮಂದಿ ಆಯ್ಕೆಯಾಗಿದ್ದೇವೆ ಎಂದು ಎಚ್ಚರಿಸಿದರು.