ಹಾಸನ :  ಪ್ರಜ್ವಲ್  ಮಾಧ್ಯಮದ ಮುಂದೆ ಬಂದು ರಾಜೀನಾಮೆ ವಿಚಾರ ಮಾತನಾಡುತ್ತಾರೆ. ಆದರೆ ಅದಕ್ಕೂ ಮೊದಲು ಅವರು ಪ್ರಮಾಣ ವಚನ ಸ್ವೀಕಾರ ಮಾಡಬೇಕು ಎಂದು ಬಿಜೆಪಿ ಶಾಸಕ ಪ್ರೀತಮ್ ಗೌಡ ಹೇಳಿದ್ದಾರೆ. 

ಹಾಸನದಲ್ಲಿ ಮಾತನಾಡಿದ ಪ್ರೀತಮ್ ಗೌಡ ದೇವೇಗೌಡರು ಹಾಸನ ಜಿಲ್ಲೆಯ ಧ್ವನಿಯಾಗಬೇಕು ಎನ್ನುವುದು ಇಲ್ಲಿನ ಜನರ ಆಸೆಯಾಗಿತ್ತು. ಆದರೆ ಈಗ ಕುಟುಂಬ ರಾಜಕಾರಣ ಬಂದು ಕ್ಯಾಬಿನೆಟ್ ವಿಚಾರ ಕಿಚನ್ ನಲ್ಲಿ ತೀರ್ಮಾನವಾಗಿದೆ. ಕುಟುಂಬದವರೇ ಅಭ್ಯರ್ಥಿ ಅಂತಿಮಗೊಳಿಸಿದ್ದಾರೆ ಎಂದರು. 

ಇದೇ ವೇಳೆ ಎಚ್.ಡಿ ರೇವಣ್ಣ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರೀತಮ್ ಗೌಡ ನಾವು ನಿಂಬೆ ಹಣ್ಣು ಇರಿಸಿಕೊಂಡು ಶಾಸ್ತ್ರ ಹೇಳಲ್ಲ. ಮೋದಿ ಗೆದ್ದರೆ ರಾಜಕೀಯ ಸನ್ಯಾಸತ್ವ ಪಡೆಯುತ್ತೇನೆ ಎಂದು ರೇವಣ್ಣ ಹೇಳಿದ್ದು,  ರೇವಣ್ಣ ಅವರ ಮಾತಿಗೆ ಬದ್ದವಾಗಿರಬೇಕು. ಈಗ ನಿವೃತ್ತಿ ಪಡೆಯಲಿ ಎಂದು ಸವಾಲ್ ಹಾಕಿದ್ದಾರೆ. 

ಮೋದಿ ಬಗ್ಗೆ ಟೀಕಿಸಿದವರು ಯಾರೂ ಉಳಿದಿಲ್ಲ. ಮಂಡ್ಯದಲ್ಲಿ ರೇವಣ್ಣವರು ಹೇಳಿದ ಹೇಳಿಕೆಯಿಂದ ನಿಖಿಲ್ ಗೆ ಹಿನ್ನಡೆಯಾಗಿದೆ. ತಮ್ಮ ಕ್ಷೇತ್ರಗಳನ್ನು ಬಿಟ್ಟು ದೇಶದ ಕ್ಷೇತ್ರಗಳ ಬಗ್ಗೆ ಮಾತನಾಡುವ ರೇವಣ್ಣಗೆ ಯಾರು ಅಭ್ಯರ್ಥಿಗಳಿದ್ದಾರೆ ಎನ್ನುವುದೇ ಗೊತ್ತಿಲ್ಲ ಎಂದರು. 

ಇನ್ನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು, ದೇಶದಲ್ಲಿ ಹುಡುಕಿ ನೋಡುವಂತಾಗಿದೆ. ಹಾಸನದಲ್ಲಿ ಕಾಂಗ್ರೆಸ್ ನಾಪತ್ತೆಯಾಗಿದೆ. ರಾಷ್ಟ್ರೀಯತೆ, ಭದ್ರತೆ ದೃಷ್ಟಿಯಿಂದ  ಇಡೀ ದೇಶವೇ ಮೋದಿ ಪರವಾಗಿ ನಿಂತಿದೆ ಎಂದರು. ಇದೇ ವೇಳೆ ಹಾಸನದಲ್ಲಿ ನೂತನ ಸಂಸದರಾಗಿ ಆಯ್ಕೆಯಾದ  ಪ್ರಜ್ವಲ್ ರೇವಣ್ಣಗೆ ಅಭಿನಂದನೆ ತಿಳಿಸಿದ್ದಾರೆ.