ಗಡಿ ವಿವಾದದಲ್ಲಿ ಮೊದಲಿನಿಂದಲೂ ಮರಾಠಿಗರ ಪರ ನಿಲುವು ವ್ಯಕ್ತಪಡಿಸುತ್ತಾ ಬಂದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಅವರು ಇದೇ ಮೊದಲ ಬಾರಿಗೆ ವೇದಿಕೆ ಮೇಲೆ ಬಹುರಂಗವಾಗಿಯೇ ತಮ್ಮ ಮಹಾರಾಷ್ಟ್ರ ಪ್ರೇಮ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಳಗಾವಿ (ಡಿ.11): ಗಡಿ ವಿವಾದದಲ್ಲಿ ಮೊದಲಿನಿಂದಲೂ ಮರಾಠಿಗರ ಪರ ನಿಲುವು ವ್ಯಕ್ತಪಡಿಸುತ್ತಾ ಬಂದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಅವರು ಇದೇ ಮೊದಲ ಬಾರಿಗೆ ವೇದಿಕೆ ಮೇಲೆ ಬಹುರಂಗವಾಗಿಯೇ ತಮ್ಮ ಮಹಾರಾಷ್ಟ್ರ ಪ್ರೇಮ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಳಗಾವಿ ತಾಲೂಕಿನ ಬೆಳಗುಂದಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಮತನಾಡಿದ ಸಂಜಯ್ ಪಾಟೀಲ್, ಕರ್ನಾಟಕ-ಮಹಾರಾಷ್ಟ್ರ ಗಡಿ ಕುರಿತು ನ್ಯಾಯಾಲಯದಲ್ಲಿ ನಡೆಯುತ್ತಿರುವ ವ್ಯಾಜ್ಯದ ತೀರ್ಪು ಮರಾಠಿಗರ ಪರವಾಗಿ ಬರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಜನಿಸಿದ್ದು ನನಗೆ ಮರಾಠಿ ಭಾಷೆ ಕುರಿತು ಅಪಾರವಾದ ಪ್ರೇಮವಿದೆ. ಪ್ರಸ್ತುತ ಸಾಹಿತ್ಯ ಸಮ್ಮೇಳನಕ್ಕೆ ಶಾಸಕನಾಗಿ ಬಂದಿಲ್ಲ. ಒಬ್ಬ ಮರಾಠಿಗನಾಗಿ ಪಾಲ್ಗೊಂಡಿದ್ದೇನೆ. ಮರಾಠಿಗರ ಆಸೆ, ಕನಸಿನಂತೆ ಬೆಳಗಾವಿ ವಿವಾದ ಬೇಗ ಇತ್ಯರ್ಥಗೊಳ್ಳಲಿ. ಮರಾಠಿಗರ ಪರವಾಗಿಯೇ ನಿರ್ಣಯ ಬರಲಿ ಎಂಬುದು ನನ್ನ ಹಾರೈಕೆ ಎಂದು ಕರ್ನಾಟಕ ವಿರೋಧಿ ಹೇಳಿಕೆ ನೀಡಿದ್ದಾರೆ.

ತೀವ್ರ ಆಕ್ರೋಶ:

ಸಂಜಯ್ ಪಾಟೀಲ್ ಹೇಳಿಕೆಗೆ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಕನ್ನಡ ನೆಲದಲ್ಲಿ ಮರಾಠಿಗರ ಓಲೈಕೆ ಮಾಡುತ್ತಿದ್ದಾರೆ. ಈ ಸಂಬಂಧ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.