* ಕೆಲ ಮಾಧ್ಯಮ ಕಚೇರಿಗಳಿಗೆ ಉತ್ತರ ಪ್ರದೇಶದ ದಲಿತ ಸ್ವಾಮಿಯ ಶಿಷ್ಯನ ಭೇಟಿ* ಹಿಂದುತ್ವದ ಪರ ಹೆಚ್ಚು ಸುದ್ದಿ ಹಾಕಿದರೆ ಜಾಹೀರಾತು ಕೊಡುವ ಆಮಿಷ* ಇನ್ನಷ್ಟು ಜನ ರಾಜ್ಯಕ್ಕೆ ಬಂದು ಕಾರ್ಯಾಚರಿಸುತ್ತಿರುವ ಮಾಹಿತಿ* ‘ಸುವರ್ಣ ನ್ಯೂಸ್’ ಕುಟುಕು ಕಾರ್ಯಾಚರಣೆ ಆರಂಭಿಸುತ್ತಲೇ ವ್ಯಕ್ತಿ ನಾಪತ್ತೆ
ಬೆಂಗಳೂರು: ಕರ್ನಾಟಕದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ಹಿಂದೆಂದಿಗಿಂತ ಭಿನ್ನವೂ ಭೀಕರವೂ ಆಗಲಿದೆ ಎಂಬುದು ಈಗಾಗಲೇ ಅನುಭವಕ್ಕೆ ಬರುತ್ತಿದೆ. ಅದರಲ್ಲೂ ಈ ಬಾರಿಯ ಬಿಜೆಪಿಯ ಹಲವು ತಂತ್ರಗಾರಿಕೆಗಳು ಉತ್ತರ ಭಾರತದಿಂದ ಆಮದಾಗುತ್ತಿದೆಯೇ ಎನ್ನುವ ಸಂದೇಹವೂ ಉಂಟಾಗಿದೆ. ರಾಜ್ಯದ ಚುನಾವಣಾ ತಂತ್ರಗಾರಿಕೆಯಲ್ಲಿ ಅಮಿತ್ ಶಾ ನೇರ ಪಾತ್ರವಹಿಸುವುದು ಸಹಜವಾಗಿರುವುದರಿಂದ ಅವರ ವಿವಿಧ ಗುಪ್ತ ತಂಡಗಳು ಈಗಾಗಲೇ ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ನಿರತವಾಗಿವೆ. ಹಲವು ಸುತ್ತಿನ ಸಮೀಕ್ಷೆ ನಡೆಸಿರುವ ಅಮಿತ್ ಶಾ ತಂಡಗಳು, ರಾಜ್ಯದ ತಳ ಮಟ್ಟದ ಮಾಹಿತಿ ಪಡೆದು ಅವರಿಗೆ ನಿರಂತರವಾಗಿ ರವಾನಿಸುತ್ತಲೇ ಇವೆ. ಇಷ್ಟೇ ಅಲ್ಲದೇ, ಉತ್ತರ ಪ್ರದೇಶದಿಂದ ಅಲ್ಲಿನ ಚುನಾವಣೆಯಲ್ಲಿ ಬಳಕೆಯಾಗಿದ್ದ ಬೈಕುಗಳು ಕರ್ನಾಟಕಕ್ಕೆ ಬಂದಿಳಿರುವುದು ಕೂಡ ಈಗ ಹಳೆ ಸುದ್ದಿ.
ಈ ನಡುವೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಪ್ರಯೋಗಿಸಿದ್ದ ಹಿಂದೂ ದಲಿತ ಜಾತಿ ಸಮೀಕರಣವನ್ನು ಕರ್ನಾಟಕಕ್ಕೆ ತರಲು ಯೋಜಿಸಲಾಗಿದೆಯೇ ಎಂದು ಅನುಮಾನ ಬರುವ ಘಟನೆಯೊಂದು ಬುಧವಾರ ಪತ್ತೆಯಾಗಿದೆ. ಉತ್ತರ ಪ್ರದೇಶದ ದಲಿತ ಸ್ವಾಮಿ, ಯೋಗಿ ಉಮೇಶ್'ನಾಥ ಅವರ ಅನುಯಾಯಿ ಎಂದು ಹೇಳಿಕೊಂಡ ಆಚಾರ್ಯ ಛತ್ರಪಾಲ್ ಅಟಲ್ ಎಂಬ ವ್ಯಕ್ತಿಯೊಬ್ಬರು ಬುಧವಾರ ಬೆಂಗಳೂರಿನ ಕೆಲ ಮಾಧ್ಯಮ ಕಚೇರಿಗೆ ಭೇಟಿ ನೀಡಿದ್ದರು. ಹಿಂದುತ್ವದ ಬಗ್ಗೆ ಹೆಚ್ಚು ಸಕರಾತ್ಮಕ ಸುದ್ದಿಗಳನ್ನು ಹಾಗೂ ವಿರೋಧ ಪಕ್ಷಗಳ ಕುರಿತು ಹೆಚ್ಚೆಚ್ಚು ನಕಾರಾತ್ಮಕ ಸುದ್ದಿಗಳನ್ನು ಪ್ರಕಟಿಸಿದರೆ, ತಮ್ಮ ಸರ್ಕಾರದಿಂದ ಸಾಕಷ್ಟು ಜಾಹೀರಾತು ಕೊಡಿಸುವುದಾಗಿ ಆಮಿಷ ಒಡ್ಡಿದ್ದರು. ತನ್ನಂತೇ ಇನ್ನಷ್ಟು ಸಂಘದ ಕಾರ್ಯಕರ್ತರು ಉತ್ತರ ಭಾರತದಿಂದ ಬಂದು ಸಂಘಕ್ಕೆ ತಳಮಟ್ಟದ ಮಾಹಿತಿಯನ್ನು ರವಾನಿಸುತ್ತಿರುವುದಾಗಿ ಹೇಳಿದ್ದರು. ಅವರ ಚಲನವಲನ, ಅಜೆಂಡಾ ಬಗ್ಗೆ ಅನುಮಾನಗೊಂಡು ಹೆಚ್ಚಿನ ಮಾಹಿತಿ ಕೇಳುತ್ತ ಅವರ ಮೇಲೆ ‘ಸುವರ್ಣ ನ್ಯೂಸ್’ ತಂಡ ಕುಟುಕು ಕಾರ್ಯಾಚರಣೆ ಆರಂಭಿಸುತ್ತಲೇ ನಾಪತ್ತೆಯಾಗಿದ್ದಾರೆ. ಚುನಾವಣೆಗಾಗಿ ಕೋಮು ಪ್ರಚೋದನೆಯ ಅಜೆಂಡಾ ಹೊಂದಿದ್ದ ಆ ವ್ಯಕ್ತಿಯ ಬಗ್ಗೆ ಪೊಲೀಸ್ ದೂರು ದಾಖಲಿಸಲಾಗಿದೆ. ಈ ಹಿಂದೆ ಉತ್ತರ ಪ್ರದೇಶದ ಚುನಾವಣೆಯ ಸಂದರ್ಭದಲ್ಲಿ ದಲಿತ ಮತಗಳನ್ನು ಸೆಳೆಯಲು ಅಮಿತ್ ಶಾ ಅಲ್ಲಿನ ಉಮೇಶ್'ನಾಥ್, ಇನ್ನೂ ಹಲವು ದಲಿತ ಯೋಗಿಗಳ ಪ್ರಭಾವ ಬಳಸಿದ್ದರು. ಈಗ ಕರ್ನಾಟಕದಲ್ಲೂ ದಲಿತ ಮತದಾರರ ಮೇಲೆ ಹಿಂದುತ್ವದ ಪ್ರಚೋದನೆಗಾಗಿ ಅಂತಹ ದಲಿತ ಯೋಗಿಗಳ ಪ್ರಭಾವವನ್ನು ಬಳಸಲಾಗುತ್ತಿದೆಯೇ? ಈತನೊಬ್ಬ ಡೋಂಗಿ ಆಚಾರ್ಯನೇ ಎಂಬ ಶಂಕೆ ಮೂಡಿದೆ.
ಕನ್ನಡಪ್ರಭ ವಾರ್ತೆ
epaperkannadaprabha.com
