ಗಣಿಧಣಿ ಗಾಲಿ ಜನಾರ್ದನ್​​ ರೆಡ್ಡಿ ಪುತ್ರಿ ಬ್ರಹ್ಮಿಣಿ ಹಾಗೂ ರಾಜೀವ್​ ರೆಡ್ಡಿ ವಿವಾಹ ಇಂದೆಂದೂ ಕಾಣದ ವೈಭವಕ್ಕೆ ಬೆಂಗಳೂರು ಅರಮನೆ ಮೈದಾನ ಸಾಕ್ಷಿಯಾಗಿದೆ. ಗಣಿ ಲೂಟಿಯಿಂದಲೇ ಸಾವಿರಾರು ಕೋಟಿ ಲೂಟಿ ಆರೋಪ ಹೊತ್ತು  ಜೈಲಿನಿಂದ ಬಿಡುಗಡೆಯಾದ ನಂತರ ರೆಡ್ಡಿ ಮಗಳ ಮದುವೆ ಮಾಡಲು ನೂರಾರು ಕೋಟಿ ನೀರಿನಂತೆ ಖರ್ಚು ಮಾಡುತ್ತಿದ್ದಾರೆ. ರೆಡ್ಡಿ ಅವರನ್ನು ಪಕ್ಷದಿಂದ ದೂರ ಇಟ್ಟು ಮಡಿಮಂತಿಕೆ ಪ್ರದರ್ಶಿಸುತ್ತಿದ್ದ ಕಮಲ ಪಾಳಯದ ನಾಯಕರು ನಿನ್ನೆ ರಾತ್ರಿ ರೆಡ್ಡಿಯ ಮಗಳ ಮದುವೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರು(ನ.16): ಗಣಿಧಣಿ ಗಾಲಿ ಜನಾರ್ದನ್​​ ರೆಡ್ಡಿ ಪುತ್ರಿ ಬ್ರಹ್ಮಿಣಿ ಹಾಗೂ ರಾಜೀವ್​ ರೆಡ್ಡಿ ವಿವಾಹ ಇಂದೆಂದೂ ಕಾಣದ ವೈಭವಕ್ಕೆ ಬೆಂಗಳೂರು ಅರಮನೆ ಮೈದಾನ ಸಾಕ್ಷಿಯಾಗಿದೆ. ಗಣಿ ಲೂಟಿಯಿಂದಲೇ ಸಾವಿರಾರು ಕೋಟಿ ಲೂಟಿ ಆರೋಪ ಹೊತ್ತು ಜೈಲಿನಿಂದ ಬಿಡುಗಡೆಯಾದ ನಂತರ ರೆಡ್ಡಿ ಮಗಳ ಮದುವೆ ಮಾಡಲು ನೂರಾರು ಕೋಟಿ ನೀರಿನಂತೆ ಖರ್ಚು ಮಾಡುತ್ತಿದ್ದಾರೆ. ರೆಡ್ಡಿ ಅವರನ್ನು ಪಕ್ಷದಿಂದ ದೂರ ಇಟ್ಟು ಮಡಿಮಂತಿಕೆ ಪ್ರದರ್ಶಿಸುತ್ತಿದ್ದ ಕಮಲ ಪಾಳಯದ ನಾಯಕರು ನಿನ್ನೆ ರಾತ್ರಿ ರೆಡ್ಡಿಯ ಮಗಳ ಮದುವೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಗಾಲಿ ಜನಾರ್ಧನ ರೆಡ್ಡಿ.. ಶ್ರೀಮಂತಿಕೆಗೆ ಮತ್ತೊಂದು ಹೆಸರು ಗಣಿಧಣಿ ಜನಾರ್ಧನ ರೆಡ್ಡಿ. ಅದಕ್ಕೆ ತಕ್ಕಂತೇ ತನ್ನ ಏಕೈಕ ಪುತ್ರಿ ಬ್ರಹ್ಮಿಣಿ ಮದುವೆಯನ್ನ ಅದ್ದೂರಿಯಾಗಿ ಮಾಡುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಾರು 200 ಕೋಟಿ ವೆಚ್ಚದಲ್ಲಿ ವಿಜಯನಗರ ಸಾಮ್ರಾಜ್ಯವನ್ನೇ ಸೃಷ್ಟಿಸಿದ್ದಾರೆ. ಈ ಮದುವೆ ಸೆಟ್​​​ ನೋಡಿಯೇ ಬಂದವರೆಲ್ಲ ನಿಬ್ಬೆರಗಾಗಿದ್ದಾರೆ.

ಕಮಲ ಪಾಳಯದ ಗಣ್ಯಾತಿಗಣ್ಯರಿಂದ ವಧುವರರಿಗೆ ಆಶೀರ್ವಾದ

ಒಂದೆಡೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಭ್ರಷ್ಟಚಾರ ಮುಕ್ತ ದೇಶವನ್ನಾಗಿ ಮಾಡುವುದಾಗಿ ಗುಡುಗುತ್ತಿದ್ದಾರೆ. ಇದೇ ವೇಳೆ ಭ್ರಷ್ಟಾಚಾರದ ಕಳಂಕ ಹೊತ್ತ ಜನಾರ್ಧನ​ ರೆಡ್ಡಿ ಅವರ ಸಮಾರಂಭಕ್ಕೆ ಹೋಗುವುದಿಲ್ಲ ಬಿಜೆಪಿ ಮುಖಂಡರು ಹೋಗುವುದಿಲ್ಲ ಎಂದೇ ಸುದ್ದಿ ಹಬ್ಬಿತ್ತು. .ಆದರೆ, ನಿನ್ನೆ ರಾತ್ರಿ ರೆಡ್ಡಿ ಮಗಳ ಆರತಕ್ಷತೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​​ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್​​ ಶೆಟ್ಟರ್​​, ಕೇಂದ್ರ ಸಚಿವ ಸದಾನಂದಗೌಡರ ಪತ್ನಿ ಡಾಟಿ, ಸಂಸದೆ ಶೋಭಾ ಕರಂದ್ಲಾಜೆ, ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕಾ ಪ್ರಭಾಕರ್, 19 ಬಿಜೆಪಿ ಶಾಸಕರು​​ ಭಾಗಿಯಾಗಿದ್ರು. ನೂತನ ವಧುವರರಿಗೆ ಆಶೀರ್ವದಿಸಿದ್ರು.

ಇದಲ್ಲದೇ ಜೆಡಿಎಸ್​ ರೆಬೆಲ್​​ ಶಾಸಕರಾದ ಜಮೀರ್​, ಚಲುವರಾಯ ಸ್ವಾಮಿ, ನಟ ಅಂಬರೀಷ್​ ದಂಪತಿ, ರಾಕಿಂಗ್​ ಸ್ಟಾರ್​ ಯಶ್​ ಕೂಡ ಭಾಗವಿಸಿದ್ದರು.

ಮಹೂರ್ತಕ್ಕಾಗಿ ಸಿದ್ಧಗೊಂಡಿದೆ ಅದ್ದೂರಿ ಸೆಟ್: ಶ್ರೀನಿವಾಸ ದೇಗುಲದಲ್ಲೇ ಮಾಂಗಲ್ಯಧಾರಣೆ

35 ಎಕರೆ ಅರಮನೆ ಮೈದಾನವನ್ನೇ ಶೃಂಗಾರ ಗೊಳಿಸಿರುವ ಗಾಲಿ ಜನಾರ್ಧರ್​ ರೆಡ್ಡಿ ಒಂದೊಂದು ಶಾಸ್ತ್ರಕ್ಕೆ ಒಂದೊಂದು ಸೆಟ್​ ನಿರ್ಮಿಸಿದ್ದಾರೆ. ಹಂಪಿಯ ವೈಭವದಲ್ಲಿ ಆರತಕ್ಷತೆ ನಡೆಸಿದ್ದು, ಇಂದು ಬೆಳಗ್ಗೆ ಥೇಟ್​​ ತಿರುಮಲದಲ್ಲಿರುವ ದೇವಾಲಯವನ್ನೇ ಸೃಷ್ಟಿಸಿದ್ದು, ವೆಂಕಟೇಶ್ವರ ಮುಂದೆಯೇ ಮಾಂಗಲ್ಯಧಾರಣೆ ನಡೆಯಲಿದೆ. ಈ ಮಂಟಪಕ್ಕೆ ಪ್ರವೇಶದಲ್ಲಿ 7 ಬಾಗಿಲುಗಳಿದ್ದು, ತಿಮ್ಮಪ್ಪ ದೇವಾಲಯವನ್ನೇ ನಾಚಿಸುವಂತಿದೆ. ಶ್ರೀನಿವಾಸನ ವಿಗ್ರಹದ ಮುಂದೆಯೇ ಮಂಟಪ ನಿರ್ಮಾಣ ಮಾಡಿದ್ದು, ಮಹೂರ್ತಕ್ಕೆ ಸಿದ್ದತೆ ನಡೆಸಿದ್ದಾರೆ.

ಭ್ರಷ್ಟಾಚಾರದ ಆರೋಪದಡಿ ಜೈಲು ಸೇರಿದ ಜನಾರ್ದನ ರೆಡ್ಡಿ ಮಗಳ ಮದುವೆಗೆ ಬಂದರೆ ಟೀಕೆಗೆ ಗುರಿಯಾಗಬಹುದು ಎನ್ನುವ ಕಾರಣಕ್ಕೆ ಬಿಜೆಪಿ ಈ ಸಮಾರಂಭದಿಂದ ದೂರ ಉಳಿಯುತ್ತದೆ ಎನ್ನಲಾಗುತ್ತಿತ್ತು. ಆದರೆ, ನಿನ್ನೆ ಆರತಕ್ಷತೆಗೆ ಬಂದಂತೆ ಇವತ್ತಿನ ಮುಹೂರ್ತ ಸಮಾರಂಭಕ್ಕೂ ಬಿಜೆಪಿ ನಾಯಕರು ಭಾಗಿಯಾದರೂ ಅಚ್ಚರಿ ಪಡಬೇಕಿಲ್ಲ.