ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಆರಂಭವಾಗಿದ್ದ ಆಡಳಿತಾರೂಢ ಕಾಂಗ್ರೆಸ್ ಶಾಸಕರ ಬಂಡಾಯ ತೀವ್ರಗೊಂಡು ಇನ್ನೇನು ಸರ್ಕಾರ ಉರುಳಲಿದೆ ಎಂದು ಕಾದಿದ್ದ ಬಿಜೆಪಿ ಶಾಸಕರು ಹಾಗೂ ಮುಖಂಡರಿಗೆ ತುಸು ನಿರಾಸೆಯಾಗಿದೆ.
ಬೆಂಗಳೂರು : ಸಚಿವರು ಹಾಗೂ ಶಾಸಕರ ಅಸಮಾಧಾನದ ಫಲವಾಗಿ ಸಮ್ಮಿಶ್ರ ಸರ್ಕಾರ ಉರುಳಿ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಬಹುನಿರೀಕ್ಷೆ ಹೊಂದಿದ್ದ ಬಿಜೆಪಿ ಪಾಳೆಯದಲ್ಲಿ ಇದೀಗ ಉತ್ಸಾಹ ಕುಗ್ಗಿದೆ.
ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಆರಂಭವಾಗಿದ್ದ ಆಡಳಿತಾರೂಢ ಕಾಂಗ್ರೆಸ್ ಶಾಸಕರ ಬಂಡಾಯ ತೀವ್ರಗೊಂಡು ಇನ್ನೇನು ಸರ್ಕಾರ ಉರುಳಲಿದೆ ಎಂದು ಕಾದಿದ್ದ ಬಿಜೆಪಿ ಶಾಸಕರು ಹಾಗೂ ಮುಖಂಡರಿಗೆ ತುಸು ನಿರಾಸೆಯಾಗಿದೆ.
ಮಂಗಳವಾರದವರೆಗೆ ಕಾಂಗ್ರೆಸ್‌ನಲ್ಲಿಯ ಅಸಮಾಧಾನದ ಬಗ್ಗೆ ಮತ್ತು ಸರ್ಕಾರ ಪತನಗೊಳ್ಳುವ ಬಗ್ಗೆ ಸಾಕಷ್ಟುಹೇಳಿಕೆಗಳನ್ನು ನೀಡುತ್ತಿದ್ದ ಬಿಜೆಪಿ ಶಾಸಕರು ಬುಧವಾರ ತಣ್ಣಗಾಗಿದ್ದರು. ಬಿಜೆಪಿ ಪದಾಧಿಕಾರಿಗಳು, ಶಾಸಕರು ಹಾಗೂ ಸಂಸದರ ಸಭೆ ವೇಳೆ ಈ ಬಗ್ಗೆ ಮಾತನಾಡಲು ಬಹುತೇಕರು ಹಿಂದೆ ಸರಿಯುತ್ತಿದ್ದುದು ಕಂಡುಬಂತು. ತಮ್ಮ ಪಕ್ಷದ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವ ವಿಶ್ವಾಸ ಮೊದಲಿನಷ್ಟುಕಂಡುಬರಲಿಲ್ಲ. ಆದರೂ, ನೋಡೋಣ ಎಂದು ತೇಲಿಸಿ ಮಾತನಾಡುತ್ತಿದ್ದರು.
ಈಗ ಕಾಂಗ್ರೆಸ್‌ನಲ್ಲಿಯ ಬಂಡಾಯ ಕಡಮೆಯಾದರೂ ಅದು ಕೆಲದಿನಗಳ ಬಳಿಕ ಮತ್ತೆ ಸ್ಫೋಟಗೊಳ್ಳುವ ವಿಶ್ವಾಸ ಬಿಜೆಪಿ ಶಾಸಕರಿಂದ ವ್ಯಕ್ತವಾಗುತ್ತಿದೆ. ಬಹಳ ದಿನ ಉಳಿಯುವುದಿಲ್ಲ. ಈಗ ಏಕಾಏಕಿ ಏನೂ ಆಗದಿದ್ದರೂ ಮುಂದೆ ಸರ್ಕಾರ ಪತನಗೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
