ಇದು ಚುನಾವಣೆ ವರ್ಷವಾಗಿದ್ದು, ವಿಷಯ ಬಹಳ ಸೂಕ್ಷ್ಮವಾಗಿದೆ. ಟಿಕೆಟ್ ಸಿಗದವರು ಅತೃಪ್ತರಾಗುವುದು ಸಹಜ. ಅವರ್ಯಾರೂ ಬೇರೆ ಪಕ್ಷದವರಲ್ಲ. ನಮ್ಮ ಪಕ್ಷದಲ್ಲೇ ಹಲವು ವರ್ಷಗಳಿಂದ ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದವರು. ಈ ವಿಷಯವನ್ನು ಇನ್ನೂ ಜಗ್ಗಾಡುವುದು ಸರಿ ಅಲ್ಲ. ಆದ್ದರಿಂದ ರಾಜ್ಯಾಧ್ಯಕ್ಷರೇ ಮಾತನಾಡುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾಗಿ ತಿಳಿದುಬಂದಿದೆ.
ಶಿವಮೊಗ್ಗ (ನ.20): ಬಿಜೆಪಿ ಭಿನ್ನಮತ ತಣ್ಣಗಾಗಿಸಲು ಬಿಜೆಪಿ ಪ್ರಮುಖರು ಹರಸಾಹಸ ಪಡುತ್ತಿದ್ದು, ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಮುಖಂಡರಿಗೆ ತಾಕೀತು ಮಾಡಿದ್ದಾರೆ. ಭಾನುವಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ರುದ್ರೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕೋರ್ ಕಮಿಟಿ ತುರ್ತು ಸಭೆ ನಡೆಸಿ ಈ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಪರಿವರ್ತನಾ ಯಾತ್ರೆಯ ಬಗ್ಗೆ ಚರ್ಚೆ ನಡೆದರೂ ಜತೆಗೆ ಪದವೀಧರ ಕ್ಷೇತ್ರ ಚುನಾವಣೆಯ ಬಗ್ಗೆಯೂ ಪ್ರಸ್ತಾಪವಾಗಿದೆ. ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರು, ರಾಜ್ಯಾಧ್ಯಕ್ಷರು ಕೂಡಲೇ ಅತೃಪ್ತ ಟಿಕೆಟ್ ಆಕಾಂಕ್ಷಿಗಳ ಜತೆ ಚರ್ಚಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ಮೂಲಗಳು ತಿಳಿಸಿವೆ.
ಇದು ಚುನಾವಣೆ ವರ್ಷವಾಗಿದ್ದು, ವಿಷಯ ಬಹಳ ಸೂಕ್ಷ್ಮವಾಗಿದೆ. ಟಿಕೆಟ್ ಸಿಗದವರು ಅತೃಪ್ತರಾಗುವುದು ಸಹಜ. ಅವರ್ಯಾರೂ ಬೇರೆ ಪಕ್ಷದವರಲ್ಲ. ನಮ್ಮ ಪಕ್ಷದಲ್ಲೇ ಹಲವು ವರ್ಷಗಳಿಂದ ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದವರು. ಈ ವಿಷಯವನ್ನು ಇನ್ನೂ ಜಗ್ಗಾಡುವುದು ಸರಿ ಅಲ್ಲ. ಆದ್ದರಿಂದ ರಾಜ್ಯಾಧ್ಯಕ್ಷರೇ ಮಾತನಾಡುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾಗಿ ತಿಳಿದುಬಂದಿದೆ.
ಪ್ರತಿಭಟನೆ ನಡೆಸುತ್ತಿರುವವರು ಬಿಜೆಪಿಯವರೇ. ಯಾರೂ ಅವರನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡಿಸುತ್ತಿಲ್ಲ. ಇದು ಮುಂದುವರಿದರೆ ಪಕ್ಷಕ್ಕೆ ಅಪಾಯವಾಗಬಹುದು. ಆದ್ದರಿಂದ ಇಲ್ಲಿಗೇ ಮುಗಿಸುವುದು ಸೂಕ್ತ ಎಂಬ ಅಭಿಪ್ರಾಯವೂ ಸಭೆಯಲ್ಲಿ ಮೂಡಿಬಂದಿದೆ. ಪದವೀಧರ ಕ್ಷೇತ್ರದ ಘೋಷಿತ ಅಭ್ಯರ್ಥಿ ಆಯನೂರು ಮಂಜುನಾಥ್, ಆಕಾಂಕ್ಷಿಗಳಾಗಿದ್ದ ಡಿ.ಎಸ್. ಅರುಣ್, ಗಿರೀಶ್ ಪಟೇಲ್, ಪಕ್ಷದ ಪದಾ ಧಿಕಾರಿಗಳು ಪ್ರಮುಖರು ಭಾಗವಹಿಸಿದ್ದ ಈ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಭಿನ್ನಮತ ಬಹಿರಂಗ ವಾಗಿರುವುದಕ್ಕೆ ಅಸಮಾಧಾನ ವ್ಯಕ್ತವಾಯಿತು.
ಭಿನ್ನಮತ ಕೈಬಿಟ್ಟು ಎಲ್ಲರೂ ಗೆಲವಿನತ್ತ ಎಲ್ಲರೂ ಗಮನವಿಟ್ಟು ಕೆಲಸ ಮಾಡಬೇಕು ಎಂದು ಪ್ರಮುಖರು ಸೂಚಿಸಿದ್ದಾಗಿ ಮೂಲಗಳು ತಿಳಿಸಿವೆ.