Asianet Suvarna News Asianet Suvarna News

ಇಂದು ರಾಜ್ಯಾದ್ಯಂತ ಬಿಜೆಪಿ ಸ್ಲಂ ವಾಸ್ತವ್ಯ : ಕೊಳಗೇರಿ ನಿವಾಸಿಗಳ ಮತ ಸೆಳೆವ ತಂತ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ವಿವಿಧ ಮುಖಂಡರು ಶನಿವಾರ ರಾತ್ರಿ ಸ್ಲಂ (ಕೊಳಗೇರಿ) ನಿವಾಸಿಗಳ ಮನೆಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ. ರಾಜ್ಯದ ಕೊಳಗೇರಿ ನಿವಾಸಿಗಳನ್ನು ಕಾಂಗ್ರೆಸ್‌ ಪಕ್ಷ ಕೇವಲ ವೋಟ್‌ ಬ್ಯಾಂಕ್‌ ಎಂದು ಪರಿಗಣಿಸಿದೆ ಎಂಬ ಆರೋಪ ಮಾಡಿರುವ ಬಿಜೆಪಿ ನಾಯಕರು, ಕೊಳಗೇರಿಗಳ ಅಭಿವೃದ್ಧಿಗೆ ತಮ್ಮ ಬದ್ಧತೆ ಸಾರುವ ಸಂಬಂಧ ಶನಿವಾರ ವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ.

BJP leaders to stay in slums

ಬೆಂಗಳೂರು :  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ವಿವಿಧ ಮುಖಂಡರು ಶನಿವಾರ ರಾತ್ರಿ ಸ್ಲಂ (ಕೊಳಗೇರಿ) ನಿವಾಸಿಗಳ ಮನೆಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ. ರಾಜ್ಯದ ಕೊಳಗೇರಿ ನಿವಾಸಿಗಳನ್ನು ಕಾಂಗ್ರೆಸ್‌ ಪಕ್ಷ ಕೇವಲ ವೋಟ್‌ ಬ್ಯಾಂಕ್‌ ಎಂದು ಪರಿಗಣಿಸಿದೆ ಎಂಬ ಆರೋಪ ಮಾಡಿರುವ ಬಿಜೆಪಿ ನಾಯಕರು, ಕೊಳಗೇರಿಗಳ ಅಭಿವೃದ್ಧಿಗೆ ತಮ್ಮ ಬದ್ಧತೆ ಸಾರುವ ಸಂಬಂಧ ಶನಿವಾರ ವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ.

ಯಡಿಯೂರಪ್ಪ ಹಾಗೂ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಆರ್‌.ಅಶೋಕ್‌ ಅವರು ಬೆಂಗಳೂರಿನ ಗಾಂಧಿನಗರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಅವರು ಹುಬ್ಬಳ್ಳಿ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಶಿವಮೊಗ್ಗ, ಸಂಸದೆ ಶೋಭಾ ಕರಂದ್ಲಾಜೆ ಮೈಸೂರು, ಮಾಜಿ ಸಚಿವ ಗೋವಿಂದ ಕಾರಜೋಳ ವಿಜಯಪುರ ನಗರದ ಕೊಳಗೇರಿಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜತೆಗೆ ಇತರ ಹಲವು ಮುಖಂಡರು ಆಯಾ ಕೊಳಗೇರಿಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಮರುದಿನ ಭಾನುವಾರ ಪಕ್ಷದ ಸ್ಲಂ ಮೋರ್ಚಾ ವತಿಯಿಂದ ನಡೆಸಲಾದ ರಾಜ್ಯದ ಎಲ್ಲ ಕೊಳಗೇರಿಗಳ ಅಧ್ಯಯನ ವರದಿಯನ್ನು ಯಡಿಯೂರಪ್ಪ ಅವರು ನಗರದ ಕೊಳಗೇರಿ ಪ್ರದೇಶದಲ್ಲೇ ಬಿಡುಗಡೆ ಮಾಡಲಿದ್ದಾರೆ. ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪಿ.ಸಿ.ಮೋಹನ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹಾಗೂ ವಕ್ತಾರ ಡಾ.ವಾಮನ ಆಚಾರ್ಯ ಅವರು ಈ ವಿವರ ನೀಡಿದರು.

ಈ ಹಿಂದೆ ಯಡಿಯೂರಪ್ಪ ಮತ್ತಿತರ ಪಕ್ಷದ ಮುಖಂಡರು ದಲಿತರ ಮನೆಗಳಿಗೆ ಖುದ್ದು ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. ಇದೀಗ ರಾಜ್ಯದ ಕೊಳಗೇರಿಗಳಲ್ಲಿ ತಂಗುವ ಮೂಲಕ ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸುವರು ಎಂದು ತಿಳಿಸಿದರು.

ರಾಜ್ಯದ ಸ್ಲಂಗಳಲ್ಲಿ ಸುಮಾರು 70 ಲಕ್ಷ ಜನರು ವಾಸಿಸುತ್ತಿದ್ದು, ಕಳೆದ 60 ವರ್ಷಗಳಲ್ಲಿ ಈ ನಿವಾಸಿಗಳ ಬಗ್ಗೆ ಯಾವುದೇ ಕಾಳಜಿ ವಹಿಸದಿರುವುದು ದುರದೃಷ್ಟಕರ ಸಂಗತಿ. ಮುಂಬರುವ 2020ರೊಳಗಾಗಿ ಎಲ್ಲಾ ಸ್ಲಂ ನಿವಾಸಿಗಳಿಗೂ ಪ್ರಧಾನಿ ನರೇಂದ್ರ ಮೋದಿ ರೂಪಿಸಿರುವ ಕನಸಿನ ಯೋಜನೆಯಂತೆ ಎರಡು ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಕರ್ನಾಟಕದಲ್ಲಿ ಸುಮಾರು ಎಂಟು ಲಕ್ಷ ಮನೆಗಳು ನಿರ್ಮಾಣವಾಗಲಿವೆ ಎಂದರು.

Follow Us:
Download App:
  • android
  • ios